ಕಂಪ್ಲಿ: ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಸಾಮರ್ಥ್ಯ ವೃದ್ಧಿ ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ರೈತ ಉತ್ಪಾದಕ ಸಂಸ್ಥೆಗಳ ಪದಾಧಿಕಾರಿಗಳಿಗೆ ಸೋಮವಾರ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು.
ಜಂಟಿ ಕೃಷಿ ನಿರ್ದೇಶಕ ಎಸ್. ಸೋಮಸುಂದರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೈತರು ಏಕ ಬೆಳೆ ಪದ್ಧತಿಯನ್ನು ಅವಲಂಬಿಸುವ ಬದಲು ವೈವಿಧ್ಯಮಯ ಕೃಷಿಗೆ ಆದ್ಯತೆ ನೀಡಬೇಕು. ಬೆಳೆಗಳಿಗೆ ಮೌಲ್ಯವರ್ಧನೆ, ಸಂಸ್ಕರಣೆ, ಗುಣಮಟ್ಟದ ಪ್ಯಾಕಿಂಗ್, ಬ್ರ್ಯಾಂಡಿಂಗ್ ಹಾಗೂ ಪರಿಣಾಮಕಾರಿ ಮಾರುಕಟ್ಟೆ ಕೌಶಲ್ಯಗಳನ್ನು ಅಳವಡಿಸಿಕೊಂಡು ಆನ್‌ಲೈನ್ ಮಾರುಕಟ್ಟೆ ಮೂಲಕ ಎಫ್‌ಪಿಒಗಳು ಉತ್ತಮ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಸುಕಿನ ಜೋಳ, ಭತ್ತ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಉಪ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೈತ ಉತ್ಪಾದಕ ಸಂಸ್ಥೆಗಳು ಉತ್ತಮ ಆದಾಯ ಗಳಿಸುವ ಅವಕಾಶಗಳಿವೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮೌಲ್ಯ ದೊರಕುವಂತೆ ಮಾಡುವುದರ ಜೊತೆಗೆ ರೈತರ ಆರ್ಥಿಕ ಸದೃಢತೆಗೆ ಎಫ್‌ಪಿಒಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆ (PMFME) ಹಾಗೂ ಕೃಷಿ ಮೂಲಸೌಕರ್ಯ ನಿಧಿ (AIF) ಯೋಜನೆಗಳಡಿ ಲಭ್ಯವಿರುವ ಸೌಲಭ್ಯಗಳನ್ನು ರೈತ ಉತ್ಪಾದಕ ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಗಳ ಮೂಲಕ ಸಂಸ್ಕರಣಾ ಘಟಕಗಳು, ಶೀತಗೃಹ, ಗೋದಾಮು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಿಕೊಳ್ಳುವಂತೆ ಕರೆ ನೀಡಿದರು.