ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಿದ್ದಾರೆ. ಅವರದ್ದು ಮೌಲ್ಯಾಧಾರಿತ ರಾಜಕಾರಣವಾಗಿದ್ದು, ಮೋದಿಯವರ ಅಪಾರ ಶಕ್ತಿ ದೇಶಕ್ಕೆ ಹಾಗೂ ಬಿಜೆಪಿಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕಾರಣ ಮಾಡುವುದು ಇಂದಿನ ದಿನಗಳಲ್ಲಿ ವಿರಳವಾಗಿದೆ. ಆಧುನಿಕ ಮೌಲ್ಯಗಳು ವಿಜೃಂಭಿಸುತ್ತಿರುವ ಕಾಲದಲ್ಲಿಯೂ ಪ್ರಧಾನಿ ಮೋದಿ ಅವರು ತಮ್ಮ ನಡೆ- ನುಡಿಯ ಮೂಲಕ ಮೌಲ್ಯಾಧಾರಿತ ರಾಜಕಾರಣವನ್ನು ಪ್ರದರ್ಶಿಸುತ್ತಿದ್ದಾರೆ. ಬಡವರು, ದೀನದಲಿತರು, ದಿವ್ಯಾಂಗರು ಹಾಗೂ ಅಬಲೆಯರ ಸೇವೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಹಾಕಿಕೊಟ್ಟ ಸೇವೆಯ ಮಾದರಿಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಕುಡಿಯುವ ನೀರು, ಸ್ವಚ್ಛತೆ-ನೈರ್ಮಲ್ಯ, ಆಹಾರ ಪದಾರ್ಥಗಳ ವಿತರಣೆ, ಆಯುಷ್ಮಾನ್ ಭಾರತ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಮೂಲಕ ಸುಮಾರು 25 ಕೋಟಿ ಬಡ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕಾರ್ಯ ಮಾಡಲಾಗಿದೆ. ಮೋದಿ ಅವರು ಯಾರಿಗೂ ವೈಯಕ್ತಿಕ ಆಸ್ತಿ ಮಾಡಿಕೊಡದೆ, ದೇಶದ 140 ಕೋಟಿ ಜನರನ್ನು ಅಭಿವೃದ್ಧಿಯ ಮುಂಚೂಣಿಗೆ ತರುವ ಉದ್ದೇಶದಿಂದ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ಮೀಸಲಿಟ್ಟಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಹಿಂದೆ ಅಸಾಧ್ಯವೆಂದು ಭಾವಿಸಿದ್ದ ಹಲವು ಕಾರ್ಯಗಳನ್ನು ಸಾಧ್ಯವಾಗಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.ರಕ್ತದಾನ ಸೇರಿದಂತೆ ವಿವಿಧ ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಯಕವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಜನಸೇವೆ ಮಾಡಬೇಕು. ಕಾಂಗ್ರೆಸ್‌ನವರು 24/7 ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಸೇವಾ ಕಾರ್ಯದ ಜತೆಗೆ ರಾಜಕಾರಣ ಮಾಡುತ್ತಿದೆ. ನರೇಂದ್ರ ಮೋದಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಕರೆ ನೀಡಿದರು.
ನರೇಂದ್ರ ಮೋದಿ ಅವರ ಆದರ್ಶ ಹಾಗೂ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. 2047ರ ವಿಕಸಿತ ಭಾರತ ಸಂಕಲ್ಪದಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮೋದಿ ಅವರ ಕಾರ್ಯಕ್ಕೆ ಸಾಥ್ ನೀಡಬೇಕು ಎಂದರು.
ದೇಶದ ಆರ್ಥಿಕತೆಯನ್ನು ಪರಾವಲಂಬನೆಯಿಂದ ಮುಕ್ತಗೊಳಿಸಿ ಶ್ರೀಮಂತ ರಾಷ್ಟ್ರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿ, ಮೂರು ಬಾರಿ ಪ್ರಧಾನಮಂತ್ರಿಯಾಗಿ ಜಗತ್ತಿನ ಅತಿದೊಡ್ಡ ನಾಯಕರಾಗಿ ಹೊರಹೊಮ್ಮಿದ್ದಾರೆ. ಬಡವರು, ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೋದಿಜಿಯವರ ಕೈ ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದ್ದಾರೆ.