ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳು ಮಾಡುವ ಸಾಧನೆಗೆ ಮೌಲ್ಯ ಬರುವುದು ಅವರ ವ್ಯಕ್ತಿತ್ವದಿಂದ, ಸೋಲಿಗೆ ನೆಪಗಳನ್ನು ಹುಡಕದೆ ಕಾರಣಗಳನ್ನು ಹುಡುಕುವುದರಿಂದ ಯಶಸ್ಸು ಸಿಗುತ್ತದೆ. ಸೌಲಭ್ಯಗಳ ಕೊರತೆ ಯಾವಾಗ ಇರುತ್ತದೋ ಆಗ ಕೊರತೆ ನಿವಾರಣೆ ಮಾಡಲು ಛಲ ಬರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಪೂರ್ವ ಸಿದ್ದತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಛಲದಿಂದ ಓದಿದರೆ ಸಾಧನೆ ಸಾಧ್ಯ
ವಿದ್ಯಾರ್ಥಿಗಳಿಗೆ ಒಂದು ಗುರಿ ಇರಬೇಕು. ಅದನ್ನು ಸಾಧಿಸುವ ಕನಸನ್ನು ಕಾಣಬೇಕು. ಒಳ್ಳೆಯ ಮಾರ್ಗವನ್ನು ಅನುಸರಿಸುವುದರಿಂದ ಅದನ್ನು ಸಾಧಿಸಬಹುದು. ನಿಮ್ಮ ಅಮೂಲ್ಯವಾದ ಸಮಯ ಮೊಬೈಲ್‌ಗಳಿಂದ ವ್ಯರ್ಥಮಾಡಬಾರದು. ಮೊಬೈಲ್‌ನ್ನು ಹೇಗೆ, ಯಾವಾಗ ಬಳಸಬೇಕು ಎಂದು ತಿಳಿಯಬೇಕು ಎಂದು ಹೇಳಿದರು.ಜಿಲ್ಲಾಡಳಿತದಿಂದ ಐವತ್ತು ವಿದ್ಯಾರ್ಥಿಗಳಿಗೆ ಕೋಚಿಂಗ್‌ಗಾಗಿ ಪ್ರೋತ್ಸಾಹ ಹಣ ನೀಡಲಾಗಿದೆ. ೧೦೦ ಅಭ್ಯರ್ಥಿಗಳಿಗೆ ಪ್ರತ್ಯೇಕ ಸ್ಟಡಿ ಕ್ಯೂಬಿಕಲ್ಸ್, ೨೦೦೦ಕ್ಕೂ ಹೆಚ್ಚ್ಟು ಅತ್ಯುಪಯುಕ್ತ ಪುಸ್ತಕಗಳುಳ್ಳ ಗ್ರಂಥಾಲಯ, ಕಂಪ್ಯೂಟರ್ ಪ್ರಿಂಟರ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ, ೨೪/೭ ಯು.ಪಿ.ಎಸ್, ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳು, ಫ್ಯಾನ್ ಹಾಗೂ ಇನ್ನಿತರೆ ಎಲ್ಲಾ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹಾಗೂ ಪ್ರತಿ ದಿನ ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. ಮಾದಕ ವಸ್ತು ಬಳಬೇಡಿ
ಕೆ.ಜಿ.ಎಫ್ ಎಸ್ಪಿ ಶಾಂತರಾಜು ಮಾತನಾಡಿ, ತಂಬಾಕು, ಗುಟ್ಕಾ ಮತ್ತು ಗಾಂಜಾ ಮುಂತಾದ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಅವುಗಳ ವ್ಯಸನಕ್ಕೆ ಒಳಗಾಗದೇ ಉತ್ತಮ ಶಿಕ್ಷಣವನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳಬೇಕು, ಶಾಲಾ-ಕಾಲೇಜು ಆವರಣದಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ೧೯೩೦ ಸಂಖ್ಯೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳಿ, ಇಂಡಿಯಾ ಫಾರ್ ಐಎಎಸ್ ಸಂಸ್ಥಾಪಕ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ಅಭಿಷೇಕ್, ಚೇತನ್.ಎನ್.ಜಿ ಇದ್ದರು.