ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ : ಶ್ರೀ ರಂಭಾಪುರಿ ಜಗದ್ಗುರು

KannadaprabhaNewsNetwork |  
Published : Apr 12, 2025, 12:47 AM IST
ಆಲ್ದೂರಿನ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ ಶುಕ್ರವಾರ ಮಂಡಲ ಪೂಜಾ ಸಮಾರೋಪ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು.  ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇದ್ದರು. | Kannada Prabha

ಸಾರಾಂಶ

ಆಲ್ದೂರು, ಬದುಕು ವಿಕಾಸಗೊಳ್ಳಲು ಆಧ್ಯಾತ್ಮ ಜ್ಞಾನ ಬೇಕು. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಬಲ ಇದೆ. ಮೌಲ್ಯಾಧಾರಿತ ಪರಿಪಾಲನೆಯಿಂದ ಮಾನವ ಜೀವನಕ್ಕೆ ಬೆಲೆ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ನುಡಿದರು.

ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಸಂಯೋಜಿಸಿದ ಮಂಡಲ ಪೂಜೆ

ಕನ್ನಡಪ್ರಭ ವಾರ್ತೆ, ಆಲ್ದೂರು

ಬದುಕು ವಿಕಾಸಗೊಳ್ಳಲು ಆಧ್ಯಾತ್ಮ ಜ್ಞಾನ ಬೇಕು. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಬಲ ಇದೆ. ಮೌಲ್ಯಾಧಾರಿತ ಪರಿಪಾಲನೆಯಿಂದ ಮಾನವ ಜೀವನಕ್ಕೆ ಬೆಲೆ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ನುಡಿದರು.ಶುಕ್ರವಾರ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ ಮಂಡಲ ಪೂಜಾ ಸಮಾರೋಪ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಬಿತ್ತಿದ ಬೀಜದಂತೆ ಬೆಳೆ ಹೇಗೋ ಹಾಗೆ ನಮ್ಮ ಆಚರಣೆಯಂತೆ ಫಲ ಪ್ರಾಪ್ತವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯ ಲಾರದಿರುವುದೇ ಹಲವಾರು ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪಾಗದು. ಶಾಂತಿ ನೆಮ್ಮದಿಗೆ ಸಂತೃಪ್ತಿ ಸಮೃದ್ಧಿಗೆ ಧರ್ಮಾಚರಣೆ ಬಹಳ ಅವಶ್ಯಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿ ಯಾಗಬೇಕಲ್ಲದೇ ಮಾರಕವಾಗಬಾರದು ಎಂದರು.

ಸ್ವಾರ್ಥ ರಹಿತ ಬದುಕಿಗೆ ಬಹಳಷ್ಟು ಶಕ್ತಿಯಿದೆ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ ಸುಂದರ ಶಿಲಾ ದೇಗುಲ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದ ಶ್ರೀಗಳು, ಇದಕ್ಕಾಗಿ ಸಹಕರಿಸಿದ ದಾನ ಮಾಡಿದ ಎಲ್ಲ ದಾನಿಗಳಿಗೆ ಶುಭ ಹಾರೈಸಿದರು.ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಶಿಕ್ಷಣವಿಲ್ಲದೇ ಬದುಕಬಹುದು. ಆದರೆ, ಸಂಸ್ಕಾರ ಸಂಸ್ಕೃತಿ ಇಲ್ಲದೇ ಬಾಳಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಾದಿ ಶರಣರು ಜೀವನ ದರ್ಶನದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು.

ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಮಾತನಾಡಿ, ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯ ಕ್ಷೇತ್ರಗಳು ಸ್ಫೂರ್ತಿ ಮತ್ತು ಚೈತನ್ಯ ನೀಡುವ ಕೇಂದ್ರಗಳಾಗಿವೆ. ಮಾನವನ ಉನ್ನತಿಗೆ ಧರ್ಮ ತಳಹದಿ ಯಾಗಿದೆ. ಪೂರ್ವಜರ ಅನುಭವದ ನುಡಿಗಳು ಬೆಳೆಯುವ ಜನಾಂಗಕ್ಕೆ ಆಶಾಕಿರಣ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನವೆಂದರು.ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಂಡ ನಾಡು ಭಾರತ. ಸಾಮರಸ್ಯ ಸೌಹಾರ್ದತೆಯಿಂದ ಬದುಕಿ ಬಾಳುವುದೇ ಪ್ರತಿಯೊಬ್ಬರ ಧರ್ಮ. ವೃತ್ತಿ ಆಧರಿಸಿ ಜಾತಿಗಳು ನಿರ್ಮಾಣ ಗೊಂಡಿವೆ. ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ಕೊಡಬೇಕಾಗಿದೆ. ಮಾನವ ಧರ್ಮಕ್ಕೆ ಜಯವಾಗಲೆಂಬ ವಿಶ್ವ ಬಂಧುತ್ವ-ಭಾವೈಕ್ಯತೆ ಸಾರಿದ್ದು ರಂಭಾಪುರಿ ಪೀಠ ಎಂಬುದನ್ನು ಮರೆಯಬಾರದು. ವಿಶ್ವದ ದಾರ್ಶನಿಕರು ವಿಶಾಲ ಮನೋಭಾವನೆಯಿಂದ ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ ಮಾತನಾಡಿ, ಇಂದು ನಮ್ಮೆಲ್ಲರ ಬಾಳಿನ ಭಾಗ್ಯೋದಯದ ದಿನ. ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಿ ನಡೆದಂತೆ ಮಂಡಲ ಪೂಜಾ ಸಮಾರೋಪ ಅಷ್ಟೇ ಸಂಭ್ರಮದಿಂದ ಜರುಗಿದ್ದು ಎಲ್ಲರಿಗೂ ಸಂತೋಷವಾಗಿದೆ. ಲೋಕ ಕಲ್ಯಾಣಾರ್ಥವಾಗಿ ಜನ ಕಲ್ಯಾಣಕ್ಕಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿರು ವುದು ನಮಗೆ ಎಲ್ಲಿಲ್ಲದ ಹರುಷ ಉಂಟು ಮಾಡಿದೆ. ಎಲ್ಲಾ ಸಮುದಾಯದ ಜನ ಸಹಕರಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದ್ದಕ್ಕೆ ಸಮಿತಿ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.

ಶ್ರೀ ಮಹಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಎಚ್‌.ಎಲ್‌. ರವಿ, ಖಜಾಂಚಿ ಬಿ.ಎಸ್.ರಾಜೀವ, ಸಂಘಟನಾ ಕಾರ್ಯದರ್ಶಿ ಡಿ.ಸಿ. ಗಿರೀಶ ಎಚ್.ಎಲ್.ರವಿಕುಮಾರ ಗಣ್ಯರು ದಾನಿಗಳು ಪಾಲ್ಗೊಂಡಿದ್ದರು. 11 ಕೆಸಿಕೆಎಂ 1

ಆಲ್ದೂರಿನ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ ಶುಕ್ರವಾರ ಮಂಡಲ ಪೂಜಾ ಸಮಾರೋಪ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?