ಅಂಕೋಲಾ: ವೃಕ್ಷಮಾತೆ, ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಅವರ ಅಂತ್ಯಕ್ರಿಯೆ ಸೇರಿದ್ದ ಸಾವಿರಾರು ಶೋಕತಪ್ತ ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರಾದ ಹೊನ್ನಳ್ಳಿಯಲ್ಲಿ ಮಂಗಳವಾರ ನೆರವೇರಿತು.
ಅವರ ಮನೆಯ ಸಮೀಪದಲ್ಲೇ ಇರುವ ಅವರದ್ದೇ ಜಮೀನಿನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ತುಳಸಿ ಅವರ ಪುತ್ರ ಸುಬ್ರಾಯ ಗೋವಿಂದ ಗೌಡ ಅಂತಿಮ ವಿಧಿ ವಿಧಾನ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ಬಹುದಿನಗಳ ಅನಾರೋಗ್ಯದ ಬಳಿಕ ಸೋಮವಾರ ಕೊನೆಯುಸಿರೆಳೆದಿದ್ದ ತುಳಸಿ ಗೌಡ ಅವರ ಪಾರ್ಥಿವ ಶರೀರವನ್ನು ಅವರ ಮನೆಯ ಮುಂಭಾಗದಲ್ಲಿರುವ ಅವರ ಕೃಷಿ ಭೂಮಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ರಾತ್ರಿಯಿಂದಲೇ ಅಂತಿಮ ನಮನ ಸಲ್ಲಿಸಿದರು. ಮಂಗಳವಾರ ಮುಂಜಾನೆಯೂ ಹಲವಾರು ಜನರು ಆಗಮಿಸಿ ಅಗಲಿದ ಹಿರಿಯ ಚೇತನಕ್ಕೆ ಅಂತಿಮ ಗೌರವ ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಕುಶಾಲ ತೋಪು ಹಾರಿಸಿ ವಿಶೇಷ ಸರ್ಕಾರಿ ಗೌರವ ಸಲ್ಲಿಸಲಾಯಿತು. ತುಳಸಿ ಗೌಡ 8 ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಜಗದೀಶ ಮನೆಗೇ ಬಂದು ಚಿಕಿತ್ಸೆ ನೀಡುತ್ತಿದ್ದರು. ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ವೆಂಟಿಲೇಟರ್, ಬೆಡ್ ವ್ಯವಸ್ಥೆ ಕಲ್ಪಿಸಿದ್ದರು.
ಅಧಿಕಾರಿಗಳಿಂದ ಗೌರವ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಡಿಸಿಎಫ್ ರವಿಶಂಕರ್, ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಅನಂತ ಶಂಕರ್, ಡಿವೈಎಸ್ಪಿ ಎಸ್.ವಿ. ಗಿರೀಶ್, ಡಿಎಆರ್ ಎಸ್‌ಪಿ ದಿಲೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಎಂ., ಆರ್‌ಪಿಐ ಫಕೀರೇಶ, ಸಿಪಿಐ ಚಂದ್ರಶೇಖರ್ ಮಠಪತಿ, ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಠಣಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಗೌರವ ಸಲ್ಲಿಸಿದರು.ಜನಪ್ರತಿನಿಧಿಗಳಿಂದ ಅಂತಿಮ ನಮನ: ಶಾಸಕ ಸತೀಶ್ ಸೈಲ್, ಮಾಜಿ ಶಾಸಕ ಕೆ.ಎಚ್. ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ್, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಪುರಸಭೆ ಸದಸ್ಯ ಪ್ರಕಾಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಗೋಪು ನಾಯಕ ಅಡ್ಲೂರು, ಬಿಜೆಪಿ ಮಂಡಲದ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ, ವಾಸರ್ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ್ ನಾಯಕ, ಅಮದಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಸರಸ್ವತಿ ಗೌಡ, ಸದಸ್ಯ ಜಿ.ಎಂ. ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ವೆರ್ಣೇಕರ, ಶಂಕರ ಗೌಡ, ಟಿ.ಕೆ. ಗೌಡ ಸೇರಿದಂತೆ ಸಹಸ್ರಾರು ಜನರು ತುಳಸಿ ಗೌಡ ಅವರ ಅಂತಿಮ ದರ್ಶನ ಪಡೆದರು.ತೀವ್ರ ಆಘಾತ: ನಮ್ಮ ಅಜ್ಜಿಯನ್ನು ಕಳೆದುಕೊಂಡಿರುವುದು ತೀವ್ರ ಆಘಾತ ಆಗಿದೆ. ಅವರು ಮನೆಯಲ್ಲಿ ಮಲಗಿದ್ದರೂ ಸಾಕಿತ್ತು. ನಾವು ನೋಡಿಕೊಳ್ಳುತ್ತಿದ್ದೆವು. ಅವರ ಅಂತಿಮ ದರ್ಶನಕ್ಕೆ ಬಂದ ಎಲ್ಲರೂ ನಮಗೆ ಸಾಂತ್ವನ ಹೇಳಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತುಳಸಿ ಗೌಡ ಅವರ ಮೊಮ್ಮಗ ಶೇಖರ ಸುಬ್ರಾಯ ಗೌಡ ತಿಳಿಸಿದರು.