ಜೂನ್‌ 3ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ವಂದೇ ಭಾರತ್‌

KannadaprabhaNewsNetwork |  
Published : Jun 01, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ಜೂನ್ 3 ರಿಂದ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ‌ ಸಚಿವ ವಿ.ಸೋಮಣ್ಣ ತಿಳಿಸಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ಜೂನ್ 3 ರಿಂದ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ‌ ಸಚಿವ ವಿ.ಸೋಮಣ್ಣ ತಿಳಿಸಿದರು.ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಭಾನುವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ‌ನೆರವೇರಿಸಿ ಮಾತನಾಡಿ ರಾಜ್ಯದಲ್ಲಿ ಶೇ.99 ರಷ್ಟು ವಿದ್ಯುದೀಕರಣ ಪೂರ್ಣಗೊಂಡಿದ್ದು, ಕೇವಲ ಶೇ.1 ರಷ್ಟು ಬಾಕಿ ಇದೆ. ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದ ವರೆಗೆ 55 ಕಿ.ಮೀ ವಿದ್ಯುದೀಕರಣ ಬಾಕಿ ಇತ್ತು.‌ ನಾಲ್ಕೈದು ಬಾರಿ ಅಧಿಕಾರಿಗಳೊಂದಿಗೆ ಭೇಟಿ‌ ನೀಡಿ, ಸಮಸ್ಯೆ ಪರಿಹರಿಸಿ ಇದೀಗ ಪೂರ್ಣಗೊಳಿಸಲಾಗಿದೆ. ಜೂ‌ನ್ 3 ರಿಂದ ಪ್ರಾಯೋಗಿಕವಾಗಿ ವಂದೇ ಭಾರತ್ ರೈಲು ಸಂಚಾರ ಆರಂಭ ವಾಗಲಿದ್ದು, ಮುಂದಿ‌ನ 15 ರಿಂದ 20 ದಿನದಲ್ಲಿ ಬೆಂಗಳೂರಿನಿಂದ‌ ಮಂಗಳೂರಿಗೆ, ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.ಸದ್ಯ12 ವಂದೇ ಭಾರತ್ ರೈಲು ರಾಜ್ಯದ 14 ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿವೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಚಾರ ಮಾಡುವ 13 ನೇ ವಂದೇ ಭಾರತ್ ರೈಲು ಶೀಘ್ರದಲ್ಲಿ ಸೇರ್ಪಡೆಯಾಗಲಿದೆ. ಇನ್ನೂ ಮಂಜೂರಾದ 6 ಅಮೃತ್ ಭಾರತ್ ರೈಲು ಪೈಕಿ ಐದು ರಾಜ್ಯದಲ್ಲಿ ಸಂಚಾರ ಮಾಡುತ್ತಿವೆ. ಸುರಕ್ಷತೆ ದೃಷ್ಟಿಯಿಂದ ರಾಜ್ಯದ ರೈಲ್ವೆ ನಿಲ್ದಾಣದಲ್ಲಿ 835 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.10 ರಿಂದ 15 ದಿನದಲ್ಲಿ ಅರಸೀಕೆರೆ ಯಿಂದ ಬೆಂಗಳೂರಿಗೆ ಮೆಮೋ ರೈಲು ಸಂಚಾರ ಆರಂಭಿಸಲಿದ್ದೇವೆ. ಅರಸೀಕೆರೆಯಿಂದ ಬೆಂಗಳೂರಿಗೆ ಕೇವಲ ₹35 ರು. ದರ‌ ನಿಗದಿ‌‌ಪಡಿಸಲಾಗಿದೆ ಎಂದರು.ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ನಿಂತು ಹೋಗಿದ್ದ‌ 30 ರೈಲುಗಳನ್ನು ಪುನರ್ ಆರಂಭಿಸಲಾಗಿದೆ. ರಾಜ್ಯದ 61 ರೈಲ್ವೆ‌ ನಿಲ್ದಾಣ‌ಗಳಲ್ಲಿ ₹2 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ರೈಲ್ವೆ ಸಚಿವನಾದ ಬಳಿಕ 3,840 ಕಿ.ಮೀ ಹೊಸ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗಿದೆ. 31 ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು‌‌ ಮಾಹಿತಿ ನೀಡಿದರು..ಕೇಂದ್ರ ಸರ್ಕಾರ 2026-27ನೇ ಸಾಲಿಗೆ ಕರ್ನಾಟಕಕ್ಕೆ ರೈಲ್ವೆ ಅಭಿವೃದ್ಧಿಗೆ ₹7748 ಕೋಟಿ ಅನುದಾನ ನೀಡಿದೆ. ಹಿಂದೆ ಇದ್ದ ಸರ್ಕಾರಗಳು ಕೇವಲ ₹300 ರಿಂದ 340 ಕೋಟಿ ನೀಡುತ್ತಿದ್ದವು. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ವರ್ಷಗಳಲ್ಲಿ ₹52,900 ಕೋಟಿ ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ.

ತುಮಕೂರು-ರಾಯದುರ್ಗ, ತುಮಕೂರು- ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಬಾಕಿ ಉಳಿದಿದ್ದ 33-34ರ ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.2 ವರ್ಷದಲ್ಲಿ 400 ಲೆವಲ್ ಕ್ರಾಸಿಂಗ್ ಮುಕ್ತ:ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್‌ಗಳು ಇರಬಾರದು ಎಂಬುದು ಪ್ರಧಾನಿರ ಸೂಚಿಸಿದ್ದರು. ರಾಜ್ಯದಲ್ಲಿ ಈಗಾಗಲೇ 707 ಲೆವಲ್ ಕ್ರಾಸ್ ಗೇಟ್‌ಗಳನ್ನು ತೆರವುಗೊಳಿಸಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸಲಾಗಿದೆ. ಇನ್ನುಳಿದ 400 ಕ್ಕೂ ಹೆಚ್ಚು ಗೇಟ್‌ಗಳನ್ನು ಮುಂದಿನ 2 ವರ್ಷಗಳಲ್ಲಿ ಮುಕ್ತಾಯ ಗೊಳಿಸಲಾಗುವುದು. ಇದರಿಂದ ಸಾರ್ವಜನಿಕರ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದರು.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಒಂದು‌ ಊರಿಗೆ ಮೂರು‌ ರೈಲ್ವೆ ಲೆವಲ್ ಕ್ರಾಸಿಂಗ್ ಇತ್ತು. ರೈಲ್ವೆ ಇಲಾಖೆ ₹150 ಕೋಟಿ‌ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಅಲ್ಲಿನ ಸಂಸದರು ಕಾಂಗ್ರೆಸ್ ಪಕ್ಷದವರು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದರು.---ಬಾಕ್ಸ್.....ರೈಲ್ವೆ ಅಂಡರ್ ಪಾಸ್ ನಿರ್ವಹಣೆ ಗ್ರಾಪಂಗೆರಾಜ್ಯದಲ್ಲಿ ಇರುವ ರೈಲ್ವೆ ಕೆಳಸೇತುವೆಗಳ‌ ಮಳೆಗಾಲದಲ್ಲಿ ನೀರು ತುಂಬಿಕೊಂಡು ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ, ನೀರು ಹೊರ ಹೋಗುವುದಕ್ಕೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ವರದಿ ಸಿದ್ಧ ಪಡಿಸುವುದಕ್ಕೆ ಸೂಚಿಸಿದ್ದೇನೆ. ವಿದ್ಯುತ್ ದೀಪ‌ದ ವ್ಯವಸ್ಥೆ ಸಹ ಮಾಡಿ, ಅದರ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ವಹಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಚಾಲನೆ ನೀಡುತ್ತೇವೆ ಎಂದು ವಿ.ಸೋಮಣ್ಣ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಡಿಸಿಎಂ, ಮಹದೇವಪ್ಪಗೆ ಸಚಿವ ಸ್ಥಾನಕ್ಕೆ ಒತ್ತಾಯ
ಡಿ.ಟಿ.ಶ್ರೀನಿವಾಸಗೆ ಸಂಪುಟದಲ್ಲಿ ಸ್ಥಾನಕ್ಕೆ ಒತ್ತಾಯ