ಜನಪ್ರಿಯತೆ ಹೆಚ್ಚಿಸಿಕೊಂಡ ವಂದೇ ಭಾರತ್‌

KannadaprabhaNewsNetwork |  
Published : Aug 17, 2025, 02:56 AM IST
ಧಾರವಾಡ- ಬೆಂಗಳೂರು ವಂದೇ ಭಾರತ ರೈಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು. | Kannada Prabha

ಸಾರಾಂಶ

ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ ಶೇ. 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ. ಉತ್ತಮ ವಾತಾವರಣ, ಸ್ವಚ್ಛತೆ, ಶುಚಿಯಾದ ಊಟ ಮತ್ತು ತ್ವರಿತವಾಗಿ ಗಮ್ಯಸ್ಥಾನ ತಲುಪಿಸಲು ಸಹಕಾರಿಯಾಗಿರುವ ರೈಲು ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಅತ್ತ ಬೆಳಗಾವಿಗೂ ಬೆಂಗಳೂರಿನಿಂದ ವಂದೇ ಭಾರತ ರೈಲು ಸಂಚಾರ ಆರಂಭಿಸಿದ್ದರೆ ಇತ್ತ ಈ ಹಿಂದೆ ಆರಂಭವಾಗಿರುವ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಅಲ್ಲದೆ ಉತ್ತಮ ಆದಾಯ ದಾಖಲಿಸಿದೆ.

ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ ಶೇ. 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ. ಉತ್ತಮ ವಾತಾವರಣ, ಸ್ವಚ್ಛತೆ, ಶುಚಿಯಾದ ಊಟ ಮತ್ತು ತ್ವರಿತವಾಗಿ ಗಮ್ಯಸ್ಥಾನ ತಲುಪಿಸಲು ಸಹಕಾರಿಯಾಗಿರುವ ರೈಲು ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಪ್ರಯಾಣ ದರ ಹೆಚ್ಚಿದ್ದರೂ ಸೌಲಭ್ಯ ಮತ್ತು ಮೇಕ್ ಇನ್ ಇಂಡಿಯಾದಡಿ ಆರಂಭವಾಗಿರುವ ರೈಲಿನಲ್ಲಿ ಸಂಚರಿಸುವುದೇ ಹೆಮ್ಮೆ ಎನ್ನುತ್ತಾರೆ ಪ್ರಯಾಣಿಕರು.

ಧಾರವಾಡ-ಬೆಂಗಳೂರು ರೈಲು ಸಂಖ್ಯೆ 20661 ವಂದೇ ಭಾರತ್ ಎಕ್ಸಪ್ರೆಸ್ ಕ್ರಮೇಣ ಪ್ರಯಾಣಿಕರ ಸಂಖ್ಯೆ ಮತ್ತು ಗಳಿಕೆಯಲ್ಲಿ ಏರಿಕೆ ದಾಖಲಿಸಿದ್ದು. ಏಪ್ರಿಲ್‌ನಲ್ಲಿ ರೈಲು 25 ಟ್ರಿಪ್‌ಗಳಲ್ಲಿ 13,406 ಜನ ಪ್ರಯಾಣಿಸಿದ್ದು, ಶೇ. 101.17 ಬುಕಿಂಗ್‌ನೊಂದಿಗೆ ₹1.46 ಕೋಟಿ ಗಳಿಸಿದೆ. ಮೇ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ 27 ಟ್ರಿಪ್‌ಗಳಲ್ಲಿ 14,747ಕ್ಕೆ ಏರಿತ್ತು. ₹1.61 ಕೋಟಿ ಗಳಿಕೆಯೊಂದಿಗೆ ಶೇ. 103ಕ್ಕಿಂತ ಹೆಚ್ಚು ಬುಕಿಂಗ್ ಅನ್ನು ಕಾಯ್ದುಕೊಂಡಿದೆ. ಜೂನ್‌ನಲ್ಲಿ 12,181 ಪ್ರಯಾಣಿಕರು ಸಂಚರಿಸಿದ್ದು, ₹1.31 ಕೋಟಿ ಗಳಿಕೆಯೊಂದಿಗೆ ಬುಕಿಂಗ್ ಶೇ.88.39ರಷ್ಟಿತ್ತು. ಜುಲೈನಲ್ಲಿ ಶೇ. 80.79ರಷ್ಟು ಬುಕ್ಕಿಂಗ್‌ನೊಂದಿಗೆ 11,133 ಪ್ರಯಾಣಿಕರು ಸಂಚರಿಸಿದ್ದು ₹1.23 ಕೋಟಿ ಗಳಿಕೆ ಮಾಡಿದೆ.

ಅದೇ ರೀತಿ, ಬೆಂಗಳೂರು-ಧಾರವಾಡ ರೈಲು ಸಂಖ್ಯೆ 20662 ವಂದೇ ಭಾರತ್ ಎಕ್ಸ್‌ಪ್ರೆಸ್ ಸಹ ಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಏಪ್ರಿಲ್‌ನಲ್ಲಿ ಈ ರೈಲು 25 ಟ್ರಿಪ್ ಸಂಚರಿಸಿ 13,396 ಜನ ಪ್ರಯಾಣಿಸಿದ್ದಾರೆ. ಶೇ 101.1 ಬುಕಿಂಗ್‌ನೊಂದಿಗೆ ₹1.54 ಕೋಟಿ ಗಳಿಸಿದೆ. ಮೇ ತಿಂಗಳಲ್ಲಿ 27 ಟ್ರಿಪ್‌ಗಳಲ್ಲಿ 14,498 ಜನ ಪ್ರಯಾಣಿಸಿದ್ದು, ಶೇ. 103.31 ಬುಕಿಂಗ್‌ನೊಂದಿಗೆ ₹1.69 ಕೋಟಿ ಗಳಿಸಿದೆ. ಜೂನ್‌ನಲ್ಲಿ 92.93ರಷ್ಟು ಮುಂಗಡ ಬುಕ್ಕಿಂಗ್‌ನೊಂದಿಗೆ 12,807 ಪ್ರಯಾಣಿಕರು ಸಂಚರಿಸಿದ್ದು, ₹1.46 ಕೋಟಿ ಗಳಿಕೆ ಮಾಡಿದೆ. ಜುಲೈ ವೇಳೆಗೆ ಸಂಖ್ಯೆ 12,231 ಪ್ರಯಾಣಿಕರು ಸಂಚರಿಸಿದ್ದು, ₹1.41 ಕೋಟಿ ಗಳಿಕೆಯೊಂದಿಗೆ ಶೇ 88.75 ಬುಕಿಂಗ್ ಆಗಿತ್ತು.

ಅತ್ಯುತ್ತಮ ಸೌಲಭ್ಯಗಳು: ವಂದೇ ಭಾರತ್ ಎಕ್ಸಪ್ರೆಸ್‌ನಲ್ಲಿ ವೈಫೈ ಸೌಲಭ್ಯವಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಟ್ಯಾಬ್‌ನಲ್ಲಿ ವೈಫೈ ಪಡೆಯಬಹುದು. ರೈಲಿನಲ್ಲಿ ಕುಳಿತು ಸಾಕಷ್ಟು ಮನರಂಜನೆ ಆನಂದಿಸಬಹುದು. ಅಲ್ಲದೆ ಉತ್ತಮ ತಿಂಡಿ, ಊಟ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿರುವುದರಿಂದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಮವಾರ ನಾನು ಹಾಗೂ ನನ್ನ ಸ್ನೇಹಿತೆ ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದು ತುಂಬಾ ಖುಷಿ ನೀಡಿದೆ. ನಾನು ಐಟಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ವಂದೇ ಭಾರತ ರೈಲನ್ನು ಬಳಸುತ್ತಿರುವೆ. ರೈಲಿನಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಆಹ್ಲಾದಕರ ವಾತಾವರಣ ಇದೆ. ಜತೆಗೆ ಸಮಯದ ಉಳಿತಾಯವಾಗುತ್ತಿದೆ ಎಂದು ಐಟಿ ಉದ್ಯೋಗಿ ನೇಹಾ ಬಾರ್ಕಿ ಹೇಳಿದರು.ತುರ್ತಾಗಿ ಬೆಂಗಳೂರಿಗೆ ಪ್ರಯಾಣ ಮಾಡಬೇಕಾಗಿತ್ತು. ಆ ಸಮಯದಲ್ಲಿ ವಂದೇ ಭಾರತ ನಮಗೆ ಅನುಕೂಲವಾಗಿ ಪರಿಣಮಿಸಿತು. ಭಾರತದಲ್ಲಿ ಸಹ ರೈಲುಗಳ ಪ್ರಯಾಣ ವಿಮಾನದ ಅನುಭವ ನೀಡಿದ್ದು ಸಂತೋಷ ತಂದಿದೆ. ಜತೆಗೆ ನಮ್ಮ ಊರಿನಿಂದ ಇಂತಹ ರೈಲು ಸೇವೆ ಇರುವುದು ಮತ್ತೊಂದು ಸಂತೋಷದ ಸಂಗತಿ ಎಂದು ಎಂಜಿನಿಯರ್‌ ಶಿಲ್ಪಾ ಗೋಸಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ