ಉಡುಪಿ: ಸೆ. 7ರಂದು ಬೆಳಿಗ್ಗೆ 8.30 ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಸಂಜೆ 5 ಕ್ಕೆ ಸಾಸ್ತಾನದ ಬಸ್ ನಿಲ್ದಾಣದ ಬಳಿ ಸಮರೋಪಗೊಳ್ಳಲಿರುವ ವಂದೇ ಮಾತರಂ ಜನಜಾಗೃತ ಅಭಿಯಾನ ಮತ್ತು ಕಾಲ್ನಡಿಗೆ ಜಾಥಾದ ಕರಪತ್ರವನ್ನು 98 ವರ್ಷದ ವಯೋವೃದ್ಧ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿ ಬಿಡುಗಡೆಗೊಳಿಸಿದರು. ಮಂಗಳೂರಿನಲ್ಲಿರುವ ಕಿಣಿ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ವಿಠ್ಠಲ್ ಕಿಣಿ, ವಂದೇ ಮಾತರಂ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿರುವ ರಾಷ್ಟ್ರ ಭಕ್ತರ ಮಂತ್ರ, ವಂದೇ ಮಾತರಂ ಹೆಸರಲ್ಲಿ ಜನಜಾಗೃತಿ ಅಭಿಯಾನ ಮಾಡುತ್ತಿರುವ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಜೊತೆ ತಾನು ಕೂಡ ಪಾಲ್ಗೊಳ್ಳಲಿದ್ದೇನೆ ಎಂದು ಹೇಳಿದರು. ಇಡೀ ದೇಶ ವಂದೇ ಮಾತರಂನ ಪರವಾಗಿ ಎದ್ದು ನಿಲ್ಲಬೇಕು, ವಂದೇ ಮಾತರಂ ಕುಂದಾಪುರದ ಕಾಲ್ನಡಿಗೆ ಜಾಥಾ ರಾಷ್ಟ್ರಭಕ್ತರೆಲ್ಲರ ನೆರವಿನಿಂದ ಒಂದು ಐತಿಹಾಸಿಕ ದಾಖಲೆಯಾಗಲಿ ಎಂದು ಹೇಳಿದರು.