ಜನರಲ್ಲಿ ದೇಶಭಕ್ತಿ ಮೂಡಿಸಿದ ವಂದೇ ಮಾತರಂ

KannadaprabhaNewsNetwork |  
Published : Nov 08, 2025, 02:15 AM IST
7ಕೆಪಿಎಲ್21ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಯಾವ ಸಂದರ್ಭದಲ್ಲಿ ಜನರಿಗೆ ದೇಶ ಭಕ್ತಿ ಪರಿಕಲ್ಪನೆ ಇರಲಿಲ್ಲ. ಆಗ ರಚನೆಯಾದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶ ಪ್ರೇಮ, ಭಕ್ತಿ, ಭಾವನೆ ಹುಟ್ಟಿಕೊಳ್ಳಲು ಅನುಕೂಲವಾಯಿತು

ಕೊಪ್ಪಳ: ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶದ ಏಕತೆಯ ಭಾವನೆ ಮೂಡಿ, ಸ್ವಾತಂತ್ರ್ಯಚಳವಳಿ ದೇಶಾದ್ಯಂತ ಹರಡಲು ಈ ಗೀತೆ ಸಹಕಾರಿಯಾಯಿತು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಕೊಪ್ಪಳ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವ ಸಂದರ್ಭದಲ್ಲಿ ಜನರಿಗೆ ದೇಶ ಭಕ್ತಿ ಪರಿಕಲ್ಪನೆ ಇರಲಿಲ್ಲ. ಆಗ ರಚನೆಯಾದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶ ಪ್ರೇಮ, ಭಕ್ತಿ, ಭಾವನೆ ಹುಟ್ಟಿಕೊಳ್ಳಲು ಅನುಕೂಲವಾಯಿತು. ವಂದೇ ಮಾತರಂ ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿ ಅವರು 1875 ನ.7 ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ರಚಿಸಿದ್ದಾರೆ. ಈ ಅವಧಿಯಲ್ಲಿ ಭಾರತ ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು. ವಸಾಹತುಶಾಹಿ ಆಳ್ವಿಕೆಗೆ ರಾಷ್ಟ್ರೀಯ ಗುರುತಿನ ಪ್ರಜ್ಞೆ ಮತ್ತು ಪ್ರತಿರೋಧ ಬೆಳೆಯುತ್ತಿತ್ತು. ಈ ಸಂದರ್ಭದಲ್ಲಿ ಶಕ್ತಿ ಸಮೃದ್ಧಿ ಮತ್ತು ದೈವತ್ವದ ಸಾಕಾರ ರೂಪವಾಗಿ ಮಾತೃಭೂಮಿ ಸ್ವಾಗತಿಸುವ ಈ ಹಾಡು ಭಾರತದ ಏಕತೆ, ಸಮಗ್ರತೆ ಮತ್ತು ಸ್ವಾಭಿಮಾನದ ಜಾಗೃತಿ ಮನೊಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯ ಪ್ರೇರಣೆ ನೀಡಿತು ಎಂದರು.

ಭಾರತ ಸರ್ಕಾರದ ಕೇಂದ್ರ ಸಂಸ್ಕೃತಿ ಸಚಿವಾಲಯ ವಂದೇ ಮಾತರಂ ಗೀತೆಯ ಐತಿಹಾಸಿಕ ಮಹತ್ವ ಮತ್ತು ರಾಷ್ಟ್ರೀಯ ಮಹತ್ವ ಗುರುತಿಸಿ ಬಂಕಿಮ್ ಚಂದ್ರ ಚಟರ್ಜಿ ಅವರ ಕೊಡುಗೆ ಎತ್ತಿ ತೋರಿಸಲು ಹಾಗೂ ಗೀತೆ ಒಳಗೊಂಡಿರುವ ಏಕತೆ, ತ್ಯಾಗ ಮತ್ತು ಮಾತೃಭೂಮಿಯ ಮೇಲಿನ ಪ್ರೀತಿಯ ಮೌಲ್ಯ ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಿಸಿತು. ವಂದೇ ಮಾತರಂ ಗೀತೆಯ 150ನೇ ವರ್ಷದ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದಿಂದ ಸಾಮೂಹಿಕ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಿರೇಗೌಡ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಕುಂತಲಾ ಬಿನ್ನಾಳ ಹಾಗೂ ತಂಡದವರು ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!