ಕನ್ನಡಪ್ರಭ ವಾರ್ತೆ ಚಾಮರಾಜನಗರ ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ.ಶಿವರಾಂ ಅವರ ಪತ್ನಿ ವಾಣಿ ಕೆ. ಶಿವರಾಂ ಅವರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ವರಿಷ್ಠರು ಟಿಕೆಟ್ ನೀಡಬೇಕೆಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಅಣಗಳ್ಳಿ ಬಸವರಾಜು ಒತ್ತಾಯಿಸಿದರು.
ಬಿಜೆಪಿ ವರಿಷ್ಠ ಯಡಿಯೂರಪ್ಪ ಹಾಗೂ ಅನೇಕ ಮುಖಂಡರು ಸಹ ಕೆ. ಶಿವರಾಂ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಿವರಾಂ ಕ್ಷೇತ್ರದ ವ್ಯಾಪ್ತಿಯ 500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದರು ಎಂದರು. ಫೆ.29 ರಂದು ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದರು. ಇದರಿಂದ ರಾಜ್ಯ ಹಾಗೂ ಛಲವಾದಿ ಮಹಾಸಭಾಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.ಈಗ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಛಲವಾದಿ ಮಹಾಸಭಾದಿಂದ ಅವರ ಕುಟುಂಬದ ನೋವಿನ ಮಧ್ಯೆಯು ಅವರ ಪತ್ನಿ ವಾಣಿ ಶಿವರಾಂ ಅವರನ್ನು ಭೇಟಿಯಾಗಿ, ಕೆ. ಶಿವರಾಂ ಅಣ್ಣ ಅವರ ಸ್ಥಾನವನ್ನು ನೀವು ತುಂಬಬೇಕು. ಈ ನಿಟ್ಟಿನಲ್ಲಿ ಸಕ್ರಿಯ ರಾಜಕಾರಣ ಹಾಗೂ ಸಮಾಜಸೇವೆಗೆ ಬರುವಂತೆ ಅವರನ್ನು ಒಪ್ಪಿಸಿದ್ದೇವೆ ಎಂದರು.
ವಾಣಿ ಶಿವರಾಂಗೆ ಚಾ.ನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಗೆಲುವು ಖಚಿತ. ಶಿವರಾಂ ಮಾಡಿರುವ ಜನಪರ ಕೆಲಸಗಳು ಹಾಗೂ ಅವರ ವರ್ಚಸ್ಸು ಕ್ಷೇತ್ರದಲ್ಲಿ ಅನುಕಂಪದ ಆಲೆಯಲ್ಲಿ ವಾಣಿ ಶಿವರಾಂ ಗೆಲುವು ಸಾಧಿಸಲಿದ್ದಾರೆ. ಶಿವರಾಂ ಅವರು ಕಳೆದ 10 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಹೀಗಾಗಿ ಬಿಜೆಪಿಯಿಂದ ಟಿಕೆಟ್‌ಗೆ ಪ್ರಥಮ ಅದ್ಯತೆ ನೀಡಿದ್ದೇವೆ. ಇಲ್ಲವೇ ಇತರೇ ಪಕ್ಷಗಳು ಟಿಕೆಟ್ ನೀಡಿದರೆ, ಅವರನ್ನುಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.ಕ್ಷೇತ್ರದಲ್ಲಿ ಈ ಹಿಂದೆ ಮಾಜಿ ಸಚಿವ ದಿ.ಎಚ್.ಎಸ್. ಮಹದೇವಪ್ರಸಾದ್ ಅವರ ನಿಧನದ ಬಳಿಕ ಗೀತಾ ಮಹದೇವಪ್ರಸಾದ್, ಹಾಗೂ ದಿ.ಆರ್.ಧ್ರುವನಾರಾಯಣ್ ನಂತರ ಅವರ ಪುತ್ರ ದರ್ಶನ್‌ಧ್ರುವನಾರಾಯನ್ ಅವರು ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ, ಮಾದರಿಯಲ್ಲಿ ಕೆ.ಶಿವರಾಂ ಅವರ ಜನಪ್ರಿಯತೆಯಲ್ಲಿ ಅವರ ಪತ್ನಿ ವಾಣಿ ಶಿವರಾಂ ಜಯಗಳಿಸಲಿದ್ದಾರೆ ಎಂದರು.