ಹೊಸಪೇಟೆ: ಪ್ರತಿವರ್ಷದಂತೆ ಈ ವರ್ಷವೂ ನಗರ ಸೇರಿದಂತೆ ವಿಜಯನಗರ ಜಿಲ್ಲೆಯಾದ್ಯಂತ ವರ ಮಹಾಲಕ್ಷ್ಮಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಶುಕ್ರವಾರ ಆಚರಿಸಲಾಯಿತು.
ಹರಪನಹಳ್ಳಿಯಲ್ಲಿ ವೈಭವದ ವರಮಹಾಲಕ್ಷ್ಮಿ ಹಬ್ಬ:
ಹರಪನಹಳ್ಳಿ ತಾಲೂಕಿನಾದ್ಯಂತಹ ಶುಕ್ರವಾರ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು.ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಧನ, ಆರೋಗ್ಯ, ಸಮೃದ್ಧಿ ಮತ್ತು ಅದೃಷ್ಟ ವೃದ್ಧಿಸುತ್ತದೆ ಎಂಬ ನಂಬಿಕೆ ಗತಕಾಲದಿಂದ ಬಂದಿದೆ. ಮಹಿಳೆಯರು ಬೆಳಗಿನ ಜಾವ ಎದ್ದು ಅಭ್ಯಂಜನ ಸ್ನಾನ ಮಾಡಿ ಮಡಿ ಸೀರೆ ಉಟ್ಟು ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿ ಕಳಸದಲ್ಲಿ ಪಂಚರತ್ನ ಅಥವಾ ನಾಣ್ಯ ಹಾಕಿ ಎಲೆ, ಅಡಕೆ, ಅರಿಶಿಣ, ಕುಂಕುಮ ಹಾಗೂ ಶುದ್ಧ ಜಲವನ್ನು ಹಾಕಿ ಕಳಸ ಇಟ್ಟು ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ, ಆನಂತರ ಲಕ್ಷ್ಮೀ ಪೂಜೆ ಮಾಡಿದರು.ವರಮಹಾಲಕ್ಷ್ಮಿ ಪೂಜಿಸುವುದರಿಂದ ಮಳೆ, ಬೆಳೆ ಉತ್ತಮ ರೀತಿಯಲ್ಲಿ ಆಗುತ್ತದೆ, ಲೋಕಕಲ್ಯಾಣವಾಗುತ್ತದೆ ಎಂಬುದು ಹಿರಿಯರ ನಂಬಿಕೆ.ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಾಯಿಗಳ ಬೆಲೆ ಗಗನಕ್ಕೇರಿದರೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ಒಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರಿಗೆ ಕಳೆ ಮೂಡಿಸಿದೆ.
ಕೊಟ್ಟೂರಿನಲ್ಲಿ ವೈಭವದ ವರ ಮಹಾಲಕ್ಷ್ಮೀ ಪೂಜೆ:ಶ್ರಾವಣ ಮಾಸದ ಮೂರನೇ ಶುಕ್ರವಾರ ಕೊಟ್ಟೂರು ತಾಲೂಕಿನಲ್ಲಿ ಮಹಿಳೆಯರು ಮನೆಗಳಲ್ಲಿ ವರ ಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾ-ಭಕ್ತಿ ಮತ್ತು ಸಂಭ್ರಮಗಳೊಂದಿಗೆ ನೆರವೇರಿಸಿದರು.
ಬೆಳಗ್ಗೆಯಿಂದಲೇ ಮಹಿಳೆಯರು ವರ ಮಹಾಲಕ್ಷ್ಮೀ ಪೂಜೆಯಲ್ಲಿ ನಿರತರಾಗಿದ್ದರು. ಪೂಜೆ ಬಳಿಕ ಬಂಧುಗಳನ್ನು ಆಹ್ವಾನಿಸಿ ಉಡಿ ತುಂಬಿ ಪರಸ್ಪರ ಹಾರೈಸಿದರು. ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಉಡಿ ನೀಡಿದ್ದು ವಿಶೇಷವಾಗಿತ್ತು.ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಗೆ ಧಾರ್ಮಿಕ ಇಲಾಖೆ ವತಿಯಿಂದ ಅರಿಷಿಣ, ಕುಂಕುಮ, ಬಳೆ ನೀಡಲಾಯಿತು. ತಾಲೂಕಿನ ಗಾಣಗಟ್ಟಿ ಗ್ರಾಮದ ಶ್ರೀ ಮಾಯಮ್ಮ ದೇವಿ ದೇವಸ್ಥಾನದಲ್ಲಿ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿದರು. ಸೀರೆ, ಉಡಿ, ಅರಿಷಿಣ, ಕುಂಕುಮ, ಬಳೆಗಳನ್ನು ಪರಸ್ಪರ ವಿತರಿಸಿಕೊಂಡರು.ಸಂಡೂರಿನಲ್ಲಿ ವರಮಹಾಲಕ್ಷ್ಮಿ ಪೂಜೆ:
ಸಂಡೂರು ಪಟ್ಟಣದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮಹಾಲಕ್ಷಿಯನ್ನು ಪ್ರತಿಷ್ಠಾಪಿಸುವ ಸ್ಥಳವನ್ನು ಹಾಗೂ ಪ್ರತಿಷ್ಠಾಪಿಸಲಾದ ಮಹಾಲಕ್ಷ್ಮಿಯನ್ನು ಬಣ್ಣಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ಮಹಾಲಕ್ಷ್ಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು.