ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಕ್ರೋಧಿಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಶುಕ್ರವಾರ ಮುಂಜಾನೆ ಬ್ರಾಹ್ಮಿ ಮಹೂರ್ತದ ಮೂಲ ನಕ್ಷತ್ರದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಮೂಲ ಮೂರ್ತಿಯ ಜತೆಗೆ ದೇವಾಲಯದ ಆವರಣದಲ್ಲಿ ಇರುವ ಶ್ರೀ ಲಕ್ಷ್ಮಿದೇವಿಯ ಮೂಲ ವಿಗ್ರಹಕ್ಕೆ ಪುಣ್ಯಹ, ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷವಾಗಿ ಅಲಂಕರಿಸಲಾಯಿತು. ತಧಿ ಆರಾಧನೆ ಸೇವೆ, ನೈವೇದ್ಯ, ಸಹಸ್ರ ನಾಮಾರ್ಚನೆ, ಅರ್ಚನೆ, ಮಂಗಳಾರತಿ ನೆರವೇರಿಸಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ ಗೋದೂಳಿ ಲಗ್ನದಲ್ಲಿ ಶ್ರೀದೇವಿಯ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಲಲಿತ ಸಹಸ್ರನಾಮ ಪಠಣ, ನೈವೇದ್ಯ, ಮಹಾಮಂಗಳಾರತಿ ನೆರವೇರಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕರಾದ ನಾರಾಯಣ ಭಟ್ಟರು, ರಾಮಪ್ರಸಾದ್ ಭಟ್ಟರು ಹಾಗೂ ಶ್ರೀನಿಧಿ ನರಸಿಂಹನ್ ಪೂಜಾ ಕೈಂಕರ್ಯ ನೆರವೇರಿಸಿದರು.