ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ಅತ್ಯಂತ ಶ್ರದ್ಧಾ, ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಿದರು.ಶುಕ್ರವಾರ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ವ್ರತಾಚರಣೆಗೆ ಚಾಲನೆ ನೀಡಿದರು. ಲಕ್ಷ್ಮೀ ಮುಖವಾಡವಿಟ್ಟು ಕಳಸ ಪ್ರತಿಷ್ಠಾಪನೆ ಮಾಡಿ, ಸೀರೆ ತೊಡಿಸಿ ಚಿನ್ನಾಭರಣ ಧರಿಸಿ ಸರ್ವಾಲಂಕೃತ ವರಮಹಾಲಕ್ಷ್ಮೀಗೆ ವಿವಿಧ ಬಗೆಯ ಹಣ್ಣು, ಖರ್ಜೂರ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಕಲ್ಲುಸಕ್ಕರೆ, ಬಗೆ ಬಗೆಯ ತಿಂಡಿ- ತಿನಿಸುಗಳನ್ನಿಟ್ಟು ನೈವೇದ್ಯ ಸಮರ್ಪಣೆ ಮಾಡಿದ್ದರು.
ಮನೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಗಳಲ್ಲಿ ಬಗೆ ಬಗೆಯ ಪುಷ್ಪ ಸಹಿತ ಒಡವೆಗಳಿಂದ ಮಹಾಲಕ್ಷ್ಮೀ ಭಾವಚಿತ್ರಗಳನ್ನು ಅಲಂಕರಿಸಲಾಗಿತ್ತು. ಲಕ್ಷ್ಮೀದೇವಿಗೆ ಪ್ರಿಯವಾದ ಹಣ್ಣು- ಹೂವು ಅರ್ಪಿಸಿ, ದೀಪ ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ತಯಾರಿಸಿದ್ದ ಭೋಜನವಿಟ್ಟು ನೈವೇದ್ಯ ಅರ್ಪಿಸಿ ಲಕ್ಷ್ಮೀದೇವಿಗೆ ಕರ್ಪೂರದಾರತಿ ಬೆಳಗಿ ಭಕ್ತಿ ಭಾವ ಮೆರೆದರು.ಸಂಪ್ರದಾಯದಂತೆ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ- ಕುಂಕುಮ, ಎಲೆ, ಅಡಿಕೆ, ಹೂವು, ಹಣ್ಣು ಕೊಟ್ಟು, ಉಡಿ ತುಂಬಲಾಯಿತು. ಹಲವೆಡೆ ಮಹಿಳೆಯರು ಪರಸ್ಪರ ತಮ್ಮ ಮನೆಗೆ ಮುತ್ತೈದೆಯರನ್ನು ಅರಿಶಿನ- ಕುಂಕುಮಕ್ಕೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳಿಗೆ ಆದರದ ಆತಿಥ್ಯ ನೀಡಲಾಯಿತು.
ಹೂವು- ಹಣ್ಣು ಇನ್ನಿತರೆ ಪೂಜಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ಕೂಡ ಜನರು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ, ಸಂಪತ್ತು ಕರುಣಿಸಲೆಂದು ಮನೆ ಮನೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಪಟ್ಟಣ ಸೇರಿ ತಾಲೂಕಿನ ದೇವಲಾಪುರ, ಹೊಣಕೆರೆ, ಬಿಂಡಿಗನವಿಲೆ ಹಾಗೂ ಬೆಳ್ಳೂರು ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ಪೂಜಾ ಕಾರ್ಯದಲ್ಲಿ ಮಿಂದೆದ್ದರು.ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಕ್ತಿದೇವತೆಗಳೂ ಸೇರಿ ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶುಕ್ರವಾರ ಬೆಳಗಿನ ಜಾವವೇ ದೇವರಿಗೆ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಗಳಿಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.