ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಪತ್ತುಗಳ ನಿರ್ವಹಣೆಗೆಂದು ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಆಯ್ದ ಸ್ವಯಂಸೇವಕರಿಗೆ ಈಜು ಹಾಗೂ ಮುಳುಗುವಿಕೆಯ ಮೂಲಕ ಆಪತ್ತಿನಲ್ಲಿರುವವರ ರಕ್ಷಣೆಯ ವಿಧಾನಗಳ ಬಗ್ಗೆ ತರಬೇತಿ ವಿಟ್ಲ ಸನಿಹ ನಡೆಯಿತು.
ನೀರಿನ ಮೇಲ್ಮೈಯಲ್ಲಿ ದಣಿವಿರದ ದೀರ್ಘತೇಲುವಿಕೆ, ನೀರಿನಲ್ಲಿ ಮುಳುಗಿ ಪ್ರಜ್ಞಾಹೀನರಾದವರ ರಕ್ಷಣೆ, ಆಳನೀರಿನಲ್ಲಿ ಸುರಕ್ಷಿತ ಮುಳುಗುವಿಕೆ, ಎತ್ತರದ ಕಟ್ಟಡದಿಂದ ಏಕಾಂಗಿಯಾಗಿ ಹಗ್ಗದ ಸಹಾಯದಿಂದ ಇಳಿಯುವಿಕೆ, ನೀರಿನಲ್ಲಿ ಮುಳುಗಿದ ವಸ್ತುಗಳ ಪತ್ತೆಗೆ ಗುರುತು ನಿಗದಿಪಡಿಸುವುದು ಹಾಗೂ ಹುಡುಕುವುದು, ದಿಕ್ಸೂಚಿ ಸಹಾಯದಿಂದ ಅಪರಿಚಿತ ಸ್ಥಳ ಅಥವಾ ಕಾಡಿನಲ್ಲಿ ಸುರಕ್ಷಿತವಾಗಿ ಹಿಂದಿರುಗುವಿಕೆ, ಹಗ್ಗದ ವಿವಿಧ ಗಂಟುಗಳ ರಚನೆ ಹಾಗೂ ವಿಶ್ರಾಂತಿ ಇಲ್ಲದೆ ೨೦೦ ಮೀಟರ್‌ಗಳ ದಣಿವು ರಹಿತ ಈಜುವಿಕೆಯ ತರಬೇತಿಯನ್ನು ಸ್ವಯಂಸೇವಕರಿಗೆ ತರಬೇತುದಾರರು ನೀಡಿದರು.ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ಎಸ್.ಎಸ್ ನಿರ್ದೇಶನದಂತೆ ಈಜುವಿಕೆಯಲ್ಲಿ ಪರಿಣತಿ ಸಾಧಿಸಲು ಆಸಕ್ತಿ ಇರುವ ಬೆಳ್ತಂಗಡಿ ತಾಲ್ಲೂಕಿನ ೬ ಮಂದಿಯನ್ನುಗುರುತಿಸಲಾಗಿದ್ದು, ಬೆಳ್ತಂಗಡಿ ಶೌರ್ಯ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ ಅರಸಿನಮಕ್ಕಿ, ಸ್ವಯಂಸೇವಕರಾದ ಸಚಿನ್ ಭಿಡೆ ಮುಂಡಾಜೆ, ಜಯರಾಮ ನಡ, ಅನಿಲ್ ಪಿ.ಎ. ಸತೀಶ್ ನೆರಿಯ, ರಮೇಶ ಬೈರಕಟ್ಟ ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ವಿವೇಕ್. ವಿ. ಪಾಯಸ್ ಅವರ ಮಾರ್ಗದರ್ಶನದಲ್ಲಿ ತರಬೇತಿಪೂರ್ಣಗೊಳಿಸಿರುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಸ್ವಯಂಸೇವಕರಿಗೆ ಸಂಸ್ಥೆಯು ಪ್ರಮಾಣಪತ್ರ ನೀಡಿ ಗೌರವಿಸಿದೆ.