ಡಾ.ಶಿವಾನಂದ ಭಾರತಿ ಶ್ರೀಗಳ ವರ್ಧಂತಿ ಮಹೋತ್ಸವ

KannadaprabhaNewsNetwork | Published : Dec 26, 2024 1:03 AM

ಸಾರಾಂಶ

ಬೈಲಹೊಂಗಲ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದಲ್ಲಿ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 85ನೇ ವರ್ಷದ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ ಹಾಗೂ 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್, ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಡಿ.28 ರಿಂದ ಜ.2ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದಲ್ಲಿ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 85ನೇ ವರ್ಷದ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ ಹಾಗೂ 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್, ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಡಿ.28 ರಿಂದ ಜ.2ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಪಾಲಗೊಳ್ಳಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಶ್ರೀಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಡಿ.28ರಂದು ಬೆಳಗ್ಗೆ 10ಕ್ಕೆ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50 ವರ್ಷಗಳ ಸಾರ್ಥಕ ಸೇವೆಗೆ ಸುವರ್ಣ ಭಾರತಿ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರತಾಪರಾವ ಜಾಧವ, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಂ.ಸಿ. ಸುಧಾಕರ, ಶರಣಪ್ರಕಾಶ ಪಾಟೀಲ, ಸಂಸದರಾದ ಜಗದದೀಶ ಶೆಟ್ಟರ, ಪ್ರಿಯಾಂಕಾ ಜಾರಕಿಹೊಳಿ, ವಿಶ್ವೇಶ್ವರಹೆಗಡೆ ಕಾಗೇರಿ, ಈರಣ್ಣ ಕಡಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೊರೆ, ಗ್ರಾಪಂ ಅಧ್ಯಕ್ಷ ಶಂಕರ ಬಾಗೇವಾಡಿ ಹಾಗೂ ಶಾಸಕರು, ವಿ.ಪ. ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಲಿಸಲಿದ್ದು, ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಳೇ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ, ಶಿವಯೋಗೀಶ್ವರ ಆಂಗ್ಲ ಮಾಧ್ಯಮ ನೂತನ ಶಾಲಾ ಕಟ್ಟಡದ ಉದ್ಘಾಟಣೆ, ಸ್ಮರಣ ಸಂಚಿಕೆ, ಸದ್ಗುರು ದರ್ಶನ ಗ್ರಂಥ ಬಿಡುಗಡೆ, ಸುವರ್ಣ ಮಹೋತ್ಸವದ ಅಂಚೆ ಲಕೋಟೆ ಬಿಡುಗಡೆ, ಮಧ್ಯಾಹ್ನ 2.30ಕ್ಕೆ ಚಿಂತನ ಗೋಷ್ಠಿ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಭಕ್ತರಿಗೆ ನಿರಂತರ ಬಸ್ ವ್ಯವಸ್ಥೆ ಸೇರಿ ಸಕಲ ವ್ಯವಸ್ಥೆ ಮಾಡಳ್ಳಲಾಗಿದೆ ಎಂದವರು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಮಾತನಾಡಿ, ಡಿ.27ರಿಂದ ಜ.2ರವರೆಗೆ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

ಅಂಬಾ ಪರಮೇಶ್ವರಿ ಮಂದಿರದ ಮಹಾದ್ವಾರ ಉದ್ಘಾಟನೆ, ಜಗದ್ಗುರು ಸಿದ್ಧಾರೂಢರ ಕಥಾಮೃತ ಸಾಮೂಹಿಕ ಪಾರಾಯಣ, ಜಗದ್ಗುರು ಸಿದ್ಧಾರೂಢ ಕಥಾಮೃತದ ಶತಮಾನೋತ್ಸವ ಶೋಭಾಯಾತ್ರೆ, ಶ್ರೀಗಳವರ ತೊಟ್ಟಿಲೋತ್ಸವ, ರಜತ ರಥೋತ್ಸವ ಹಾಗೂ ಮಹಾರಥೋತ್ಸವ ನಡೆಯಲಿದೆ. ಡಿ.27ರಿಂದ ಜ.2ರ ವರೆಗೆ ಭಕ್ತರಿಂದ ಸದ್ಗುರು ಸಿದ್ಧಾರೂಢರ ಚರಿತಾಮೃತ ಪಾರಾಯಣ, ಡಿ.29ರಂದು ಬೆಳಗ್ಗೆ 8ಕ್ಕೆ ಬೈಲಹೊಂಗಲ ಪಟ್ಟಣದ ಗೊಂಬಿಗುಡಿಯಿಂದ ಆನೆಯ ಅಂಬಾರಿ ಮೆರವಣಿಗೆ ಮೂಲಕ ಇಂಚಲ ಗ್ರಾಮದ ಮಠದವರೆಗೆ ಸಹಸ್ರ ಕುಂಭೋತ್ಸವದೊಂದಿಗೆ ಮಹಾಮಂಡಲೇಶ್ವರರ ಮೆರವಣಿಗೆ ನಡೆಯಲಿದೆ.

ಡಿ.31, ಜ.1, 2ರಂದು ಬೃಹತ್ ಕೃಷಿಮೇಳ, ಜ.2ರಂದು ಬೆಳಗ್ಗೆ 12ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ, ಮಧ್ಯಾಹ್ನ 1ಕ್ಕೆ ಶ್ರಿಗಳ ಪಲ್ಲಕ್ಕಿ ಉತ್ಸವ, ಸಂಜೆ 4ಕ್ಕೆ ಶ್ರೀಗಳ ರಜತ ರಥೋತ್ಸವ, 5ಕ್ಕೆ ಶಿವಯೋಗೀಶ್ವರರ ಮಹಾ ರಥೋತ್ಸವ ಜರುಗಲಿದೆ ಎಂದು ಹೇಳಿದರು.

ಈ ವೇಳೆ ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಡಾ.ಶಿವಾನಂದ ಭಾರತಿ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಮಲ್ಲಾಪುರದ ಚಿದಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ವಿಜಯ ಮೆಟಗುಡ್ಡ, ಬಸವರಾಜ ಜನ್ಮಟ್ಟಿ, ನಾಗಪ್ಪ ಮೇಟಿ, ಸಿಪಿಐ ಐ.ಎಂ. ಮಠಪತಿ, ಪ್ರಾಚಾರ್ಯ ವಿನಯ ಮೋಹನ, ಸುನೀಲ ಮರಕುಂಬಿ, ಶಂಭು ಹೂಲಿ ಇತರರು ಇದ್ದರು.

28ರಂದು ಬೃಹತ್ ಆರೋಗ್ಯ ಮೇಳ: ಡಿ.28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರ ಇಂಚಲ, ಕೆಎಲ್‌ಇ ಆಸ್ಪತ್ರೆ ಬೆಳಗಾವಿ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಮೇಳ, ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನುರಿತ 50ಕ್ಕೂ ಅಧಿಕ ತಜ್ಞ ವೈದ್ಯರು ಆಗಮಿಸಲಿದ್ದಾರೆ. ಹೊಸೂರ-ಹುಬ್ಬಳ್ಳಿಯ ಡಾ.ಎಂ.ಎಂ. ಜೋಶಿ ನೇತೃತ್ವದಲ್ಲಿ 500ಕ್ಕೂ ಅಧಿಕ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ವೇಳೆ ಬೆಲಗಮ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನಕ್ಕೆ ಮುಂದಾಗಬೇಕು. ಅಖಿಲ ಭಾರತ ವೇದಾಂತ ಪರಿಷತ್‌ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಮಹಾಮಂಡಲೇಶ್ವರರು, ಸಾಧು ಸಂತರು ಆಗಮಿಸಲಿದ್ದು, ಸಕಲ ಭಕ್ತರು ಪಾಲ್ಗೊಂಡು ಅವರ ಅಮೃತವಾಣಿ ಆಲಿಸಿ, ಜೀವನ ಪಾವನಗೊಳಿಸಿಕೊಳ್ಳಿ, ಸಕಲ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರದ್ಧೆ, ಭಕ್ತಿಯಿಂದ ಶ್ರಮಿಸಬೇಕು.

-ಡಾ.ಶಿವಾನಂದ ಭಾರತಿ ಸ್ವಾಮೀಜಿ ಇಂಚಲ

.

Share this article