ಕನ್ನಡಪ್ರಭವಾರ್ತೆ ಹುಳಿಯಾರು
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಡಿ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಹತ್ತಿರಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೋಗಿ ಅವರ ಸಮಸ್ಯೆ ಅಲಿಸಿ ಪರಿಹರಿಸುವ ಕೆಲಸವನ್ನು ಕಳೆದ ೨೫ವಾರಗಳಿಂದ ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಸಭೆ ನಡೆಸಲಾಗುತ್ತಿದೆ. ಜನಸಾಮಾನ್ಯರು ಇದರ ಪ್ರಯೋಜನ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ದೊಡ್ಡಬಿದರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಯೋಜನೆಗಳು ಭದ್ರಾ ಮೇಲ್ದಂಡೆ, ಶಾಸಕರ ಕ್ಷೇತ್ರದ ಅಭಿವೃದ್ಧಿ ಅನುದಾನ, ಗಣಿಬಾಧಿತ ಪ್ರದೇಶಾಭಿವೃದ್ಧಿ ಅನುದಾನ ಸೇರಿ ಒಟ್ಟು ಸುಮಾರು ೨೭೬ ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ, ಕಟ್ಟಡ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕೃಷಿ ಇಲಾಖೆಯಲ್ಲಿ ೭ಸಾವಿರ ರೈತರಿಗೆ ತುಂತುರು ನೀರಾವರಿ ಸೆಟ್ ವಿತರಣೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ಶಿಬಿರ ಆಯೋಜಿಸಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ನೋಡಿಕೊಳ್ಳಲಾಗಿದೆ. ಪಿಯುಸಿ ಮಕ್ಕಳಿಗೆ ಉಚಿತ ಸಿಇಟಿ, ನೀಟ್ ತರಬೇತಿ ನೀಡಲಾಗುತ್ತಿದೆ. ಪೌತಿ ಖಾತೆ ಅಂದೊಲನ ಮೂಲಕ ೧೫ದಿನಗಳಲ್ಲಿ ಖಾತೆ ಮಾಡಿಕೊಡುವಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು ಇವೆಲ್ಲವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ತಾಂಡಾ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಸಂಗಮೇಶ್ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ಈ ರೀತಿ ಕಾರ್ಯಕ್ರಮ ಯಾರು ಮಾಡಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ಅಧಿಕಾರಿಗಳ ಜನಪ್ರತಿನಿಧಿಗಳ ಮೂಲಕ ತಲುಪಿಸುವಂತಹ ಈ ಕೆಲಸ ಉತ್ತಮವಾಗಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಯೊಜನೆ, ಗಂಗಕಲ್ಯಾಣ ಯೋಜನೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಪಶುವೈದ್ಯಾಧಿಕಾರಿ ಕಾಂತರಾಜು ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ, ವಿಳಾಸ ನೀಡುವ ಮೂಲಕ ತಮ್ಮ ಮನವಿ ಪತ್ರದ ವಿಲೇವಾರಿ ಬಗ್ಗೆ ತಿಳಿದು ಕೊಳ್ಳಬಹುದು ಎಂದು ಹೇಳಿದರು.ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಬಳ್ಳೆಕಟ್ಟೆ, ಪೋಚಕಟ್ಟೆ, ದೊಡ್ಡಬಿದರೆ, ಕೋಡಿಹಳ್ಳಿ, ಚಿಕ್ಕಬಿದರೆ, ಕಲ್ಲಹಳ್ಳಿ, ಬೈರಾಪುರ, ಅವಳಗೆರೆ ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ನಿವೇಶನ, ಮನೆ ಮಂಜೂರಾತಿ, ಭೂ ಮಂಜೂರಾತಿ, ಬಿದಿ ದೀಪ, ಶೌಚಾಲಯ, ಬಳ್ಳೆಕಟ್ಟೆ ಬಳಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಸೇರಿ ಇತರೆ ಅರ್ಜಿ ಸಾರ್ವಜನಿಕರಿಂದ ಸಲ್ಲಿಕೆಯಾದವು.
ಸ್ಥಳದಲ್ಲೇ ಶಾಸಕ ಸಿ.ಬಿ.ಸುರೇಶ್‌ಬಾಬು ಕೆಎಸ್‌ಆರ್‌ಟಿಸಿ ಡಿಎಂ ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಾಳೆಯಿಂದಲೇ ಅಲ್ಲಿ ಒಂದು ನಾಮಫಲಕ ಹಾಕಿಸಿ ನಿಲುಗಡೆಗೆ ಕ್ರಮ ವಹಿಸುವಂತೆ ತಿಳಿಸಿದರು.ದೊಡ್ಡಬಿದರೆ ಗ್ರಾಪಂ ಅದ್ಯಕ್ಷೆ ಶಾಲಿನಿ, ತಹಸೀಲ್ದಾರ್ ಮಮತಾ, ಗ್ರೇಡ್ ತಹಸೀಲ್ದಾರ್ ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ರಾಜಸ್ವ ನೀರಿಕ್ಷಕರು ಗ್ರಾಮಾಡಾಳಿತಾಧಿಕಾರಿಗಳು ಇದ್ದರು.