ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಈ ಬಾರಿಯ ವಿಶೇಷ ಎಂದರೆ ಪಟ್ಟಣದ ರಂಗಾರಸ್ತೆ ವೃತ್ತದಲ್ಲಿ ಶ್ರೀ ರಾಮಜನ್ಮಭೂಮಿ ಗಣೇಶ ಪ್ರತಿಷ್ಠಾಪಿಸಿದ್ದು ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ವೀರಾಜಮಾನನಾಗಿ ಕುಳಿತಿದ್ದರೆ ಮಂದಿರದ ಮೇಲೆ ಬಿಲ್ಲುಧಾರಿಯಾಗಿ ಶ್ರೀರಾಮಚಂದ್ರನ ಮೂರ್ತಿ ಇದೆ.
ಈಶ್ವರನ ಅವತಾರದ ಗಣಪಪ್ರತಿವರ್ಷ ವೈಶಿಷ್ಟಮಯವಾಗಿ ಗಣೇಶಮೂರ್ತಿಗಳನ್ನು ಸ್ಥಾಪಿಸಿ ಗಣೇಶೋತ್ಸವ ಆಚರಿಸುವ ರಾಮಕೃಷ್ಣರಸ್ತೆಯ ಶ್ರೀ ವಿನಾಯಕ ಬಳಗದವರು ಈ ಬಾರಿ ಈಶ್ವರನ ಅವತಾರದ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ ನಂದಿಯ ಮೇಲೆ ಕುಳಿತು ರುದ್ರದೇವನಂತೆ ವಿನಾಯಕ ಕಂಗೊಳಿಸುತ್ತಾನೆ. ಕೆ.ಇ.ಬಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನಂದಿ ಮೇಲೆ ಆಸನವಾಗಿರುವ ಶ್ವೇತ ವರ್ಣದ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಬಸ್ಟಾಂಡ್ ಬಳಿ ಮಹಾತ್ಮಾಗಾಂಧಿ ಆಟೋಸ್ಟಾಂಡ್ ನಲ್ಲಿ ಹಸಿರು ಬಣ್ಣದ ಗಣಪತಿಯನ್ನು ಸ್ಥಾಪಿಸಿದ್ದರೆ ಮುಳಬಾಗಿಲು ವೃತ್ತದ ಹನುಮಾನ್ ಆಟೋಸ್ಟಾಂಡ್ ಚಪ್ಪರದಲ್ಲಿ ನಂದಿಮೇಲೆ ಕುಳಿತ ಹಸಿರು ವರ್ಣದ ಗಣಪನಿಗೆ ಹಳದಿ ಬಣ್ಣದ ಪಂಚೆ ಉಡಿಸಿ ಪೂಜಿಸಿದ್ದಾರೆ.
ಬೃಹತ್ ಗಣಪನ ಪ್ರತಿಷ್ಠಾಪನೆ
ಸಂತೇಮೈದಾನದಲ್ಲಿ ಸ್ಥಳೀಯವಾಗಿ ಯುವಕರ ಬಳಗ ಪ್ರತ್ಯೇಕವಾಗಿ ಎರಡು ಕಡೆ ಗಣೇಶನನ್ನು ಸ್ಥಾಪಿಸಿದ್ದು ಕುದುರೆ ವಾಹನದ ಗಣೇಶ ಹಾಗು ಆನೆಯ ಸೊಂಡಲಿನ ಮೇಲೆ ಕುಳಿತ ಬೃಹತ್ ಗಣೇಶನನ್ನು ಪೂಜಿಸಿದ್ದಾರೆ. ಕೋಲಾರ ನ್ಯೂವೃತ್ತದಲ್ಲಿ ವಿನಾಯಕ ಯುವಕರ ಸಂಘ ಹಾಗು ಫ್ರೀಡಂ ಬಾಯ್ಸ್ ಜಂಟಿಯಾಗಿ 11 ವರ್ಷದ ಗಣೇಶೋತ್ಸವದಲ್ಲಿ ಸಿದ್ದಿ-ಬುದ್ದಿ ಸಮೇತ ಬೃಹದಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಂಬೇಡ್ಕರ್ ಪಾಳ್ಯದ ಯುವಕರ ತಂಡ ಕೆಂಪು ಬಣ್ಣದ ಪಂಚೆ ಉಡಿಸಿದ ಬೃಹತ್ ಗಣೇಶನನ್ನು ಪೂಜಿಸಿದ್ದಾರೆ.