ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದೇಶದ ಆಂತರಿಕ ಉಗ್ರಗಾಮಿ ಪ್ರಚೋದಿತ ಪುಂಡರು ಈದ್ ಮಿಲಾದ್ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿ ದೇಶ ದ್ರೋಹಿ ಕೃತ್ಯ ಎಸಗಿದ್ದಾರೆ. ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಶಿಂಧೆ ಆಗ್ರಹಿಸಿದರು.ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯ ಮುಖಂಡರು ಸಭೆ ಸೇರಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನದ ವಿರುದ್ಧ ಕ್ರಮಕ್ಕೆ ಪೊಲೀಸರ ಮೇಲೆ ಒತ್ತಡ ಹೇರಲು ಚರ್ಚೆ ನಡೆಸಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಜನತೆ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಜೀವನ ನಡೆಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವಿಕೃತ ಮತಾಂಧ ಉಗ್ರವಾದಿಗಳು ಜಿಲ್ಲೆಯಲ್ಲಿ ಸೇರಿಕೊಂಡು ಶಾಂತಿ ಕದಡುವ ಹುನ್ನಾರ ನಡೆಸುತ್ತಿದ್ದಾರೆ, ಇದಕ್ಕೆ ಪೂರಕ ಎಂಬಂತೆ ಪಟ್ಟಣದಲ್ಲಿ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಆಯೋಜಿಸಿದ್ದ ಧಾರ್ಮಿಕ ಆಚರಣೆಯ ರೋಡ್ ಶೋ ಕಾರ್ಯಕ್ರಮದಲ್ಲಿ ಕೆಲ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಮಾಡಿ ಉದ್ಧಟತನ ತೋರುವುದರೊಂದಿಗೆ, ಪೊಲೀಸರ ಮೇಲೆ ಏಕಾಏಕಿ ಎರಗಿದ್ದಾರೆ. ಇವರನ್ನು ಹೀಗೆ ಮುಂದುವರಿಯಲು ಬಿಟ್ಟರೆ ಮುಂದಿನ ದಿನಮಾನಗಳಲ್ಲಿ ಶಾಂತಿಯ ತೋಟವಾಗಿದ್ದ ಕೋಲಾರ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣವಾಗುವ ಸಾಧ್ಯತೆಗಳು ದಟ್ಟವಾಗಿವೆ. ಆದ್ದರಿಂದ ಪೊಲೀಸ್ ಇಲಾಖೆ ಈ ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಜರಂಗದಳ ಮಹೇಶ್ ಮಾತನಾಡಿ, ಉಗ್ರಗಾಮಿ ಕೃತ್ಯಗಳು ಈ ದೇಶಕ್ಕೆ ಮಾರಕವಾಗಿದ್ದು, ಇದನ್ನು ಪ್ರಾರಂಭಿಕ ಹಂತದಲ್ಲೇ ತಡೆಯುವುದು ಅನಿವಾರ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಭಯವಿಲ್ಲದಂತಾಗಿದೆ. ಆದಕಾರಣ ಈ ಕೂಡಲೇ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಂಡು ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಬೇಕು ಹಾಗೂ ದುರ್ಷ್ಕಮಿಗಳನ್ನು ಈ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಹಿಂದೂ ಮುಖಂಡರಾದ ಕಿಶೋರ್ ರಾಮಮೂರ್ತಿ, ಕಾರಹಳ್ಳಿ ಚಂದ್ರು, ಚಂದ್ರಶೇಖರ್, ಹನುಮಪ್ಪ, ಪ್ರಭಾಕರ್ ರಾವ್, ದೀನ, ಸಂತೋಷ್, ಗೌತಮ್, ಮುನಿರಾಜು, ವಿಶ್ವನಾಥ್, ಮಲ್ಲಿಕಾರ್ಜುನ್, ಶೋಭಿತ್, ಸುರೇಶ್ ಇದ್ದರು.