ನಾಗರ ಪಂಚಮಿಗೆ ತರಹೇವಾರಿ ಉಂಡಿಗಳು ಸಿದ್ಧ!

KannadaprabhaNewsNetwork |  
Published : Jul 26, 2025, 01:30 AM IST
ಪೋಟೋ ಇದೆ. | Kannada Prabha

ಸಾರಾಂಶ

ಶೇಂಗಾ, ಡಾಣಿ, ಬುಂದಿ, ರವೆ, ಗೊಳ್ಳಡಕಿ, ಬೇಸನ್‌, ಅಂಟಿನ್‌ ಉಂಡಿ, ಎಳ್ಳು ಹೀಗೆ ನಾನಾ ವಿಧದ ಉಂಡಿಗಳನ್ನು ಶ್ರಾವಣದ ಆರಂಭದಲ್ಲಿ ಸಿದ್ಧ ಮಾಡಿದ್ದು, ಮಾರಾಟಕ್ಕೆ ಲಭ್ಯ

ಶಿವಾನಂದ ಅಂಗಡಿ ಹುಬ್ಬಳ್ಳಿ

ಹಿಂದೂಗಳ ಪವಿತ್ರ ಮಾಸ ಶ್ರಾವಣ ಹಬ್ಬಗಳ ಮಾಸವೆಂದೇ ಹೆಸರುವಾಸಿಯಾಗಿದ್ದು, ಈ ಮಾಸಾರಂಭದ ಹಬ್ಬ ನಾಗರಪಂಚಮಿಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತರಹೇವಾರಿ ಉಂಡಿಗಳ ಮಾರಾಟ ಜೋರಾಗಿದ್ದು, ಹಬ್ಬದ ಸಿಹಿ ಹೆಚ್ಚಿಸಲು ವ್ಯಾಪಾರಸ್ಥರು ಸಾಕಷ್ಟು ಸಿದ್ಧತೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ ಮಹಾನಗರದಲ್ಲಿ ರೊಟ್ಟಿ, ಪಲ್ಯ, ಚಪಾತಿ ಮಾರುವ ಮಳಿಗೆಗಳಲ್ಲಿ ಎರಡ್ಮೂರು ದಿನ ಮೊದಲೇ 11 ವಿಧದ ಉಂಡಿಗಳ ಮಾರಾಟ ಶುರುವಾಗಿದೆ. ಮಾರಾಟಗಾರಗಾರರಿಗೆ ಈ ಹಬ್ಬ ಸುಗ್ಗಿ ಕಾಲವಾಗಿದೆ.

ಉಂಡಿಗಳು ಸಿದ್ಧ: ಶೇಂಗಾ, ಡಾಣಿ, ಬುಂದಿ, ರವೆ, ಗೊಳ್ಳಡಕಿ, ಬೇಸನ್‌, ಅಂಟಿನ್‌ ಉಂಡಿ, ಎಳ್ಳು ಹೀಗೆ ನಾನಾ ವಿಧದ ಉಂಡಿಗಳನ್ನು ಶ್ರಾವಣದ ಆರಂಭದಲ್ಲಿ ಸಿದ್ಧ ಮಾಡಿದ್ದು, ಮಾರಾಟಕ್ಕೆ ಲಭ್ಯವಿವೆ. ಕಿಲೋಗೆ ₹ 240 ರಿಂದ ₹280 ವರೆಗೂ ಮಾರಾಟ ಮಾಡುತ್ತಿದ್ದು, ಆಯಾ ಮಳಿಗಳಲ್ಲಿ ಬೆಲೆಗಳಲ್ಲಿ ವ್ಯತ್ಯಾಸವಿದೆ.

ರೊಟ್ಟಿ ಪಂಚಮಿ ದಿನ ಹಬ್ಬ ಆಚರಣೆಗೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ವಿವಿಧ ಬಗೆಯ ಗುರೆಳ್ಳ, ಶೇಂಗಾ ಚಟ್ನಿ ಪುಡಿ ಕೆಂಪು ಕಾರ ಸಹ ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಂದು ಮಡಿಕೆ ಕಾಳು, ಹೆಸರು ಕಾಳು, ಹಿಟ್ಟಿನ ಪಲ್ಯ, ಮಳಗಾಯಿ, ಎಣಿಗಾಯಿ ಪಲ್ಯ ಹೀಗೆ ತರಹೇವಾರಿ ಪಲ್ಯಗಳು ಸಿಗುತ್ತವೆ.

ಭೀಮನ ಅಮಾವಾಸ್ಯೆ ಮರುದಿನ ಶುಕ್ರವಾರದಿಂದ ಶ್ರಾವಣ ಆರಂಭವಾಗಿದೆ. ಜು. 27ರಂದು ರೊಟ್ಟಿ ಪಂಚಮಿ, 28ರಂದು ನಾಗಚತುರ್ಥಿಯಂದು ಹಾಲು ಎರೆಯುವುದು, 29ರಂದು ನಾಗಪಂಚಮಿ ನಡೆಯಲಿದೆ. 30ರಂದು ಕರೆಕಟಂಬಲಿ ಹೀಗೆ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ರೊಟ್ಟಿ ಪಂಚಮಿಯಂದು ಗೃಹಿಣಿಯರು ಬೇರೆ ಬೇರೆ ರೊಟ್ಟಿಗಳು ತಯಾರಿಸಿ, ಬಗೆ ಬಗೆಯ ಪಲ್ಯಗಳನ್ನು ತಯಾರಿಸಿ ಅಕ್ಕಪಕ್ಕದ ಮನೆಯವರಿಗೆ ಹಂಚಿ ತಾವು ರೊಟ್ಟಿ ತಿನ್ನುತ್ತಾರೆ. ನಾಗಚತುರ್ಥಿ ದಿನದಂದು ಮಣ್ಣಿನ ನಾಗಪ್ಪನಿಗೆ ಹಾಲು ಎರೆದು ಅಳ್ಳಿಟ್ಟು, ಉಸುಳಿ ನೈವೇದ್ಯ ಮಾಡುತ್ತಾರೆ. ಈ ದಿನವನ್ನು ಉಂಡಿಗಳ ಹಬ್ಬವೆಂದು ಕರೆಯಲಾಗಿದ್ದು, ಹೆಂಗಳೆಯರು ಜೋಕಾಲಿ ಜೀಕುತ್ತ ಉಂಡಿ ಸವಿಯುತ್ತಾರೆ.

ನಾಗಪಂಚಮಿ ದಿನ ಬೆಳ್ಳಿ ನಾಗಪ್ಪನಿಗೆ ಒಣಕೊಬ್ಬರಿಯಲ್ಲಿ ಹಾಲು ಹಾಕಿ ಕುಟುಂಬ ಸದಸ್ಯರೆಲ್ಲ ಹೆಸರಿನಲ್ಲಿ ಹಾಲು ಎರೆಯುತ್ತಾರೆ. ಚತುರ್ಥಿ ಹಾಗೂ ಪಂಚಮಿ ಹೀಗೆ ಎರಡು ದಿನಗಳಂದು ಒಂದು ದಿನ ಮನೆ ಹಾಗೂ ಒಂದು ದಿನ ನಾಗರಕಟ್ಟೆಗಳಿಗೆ ಹೋಗಿ ಹಾಲು ಎರೆದು ನಾಗದೇವನಿಗೆ ಭಕ್ತಿ ಸಮರ್ಪಿಸುತ್ತಾರೆ.

ನಾಗರಪಂಚಮಿ ಈ ಮಾಸದ ದೊಡ್ಡ ಹಬ್ಬವಾಗಿದ್ದು, ಶ್ರಾವಣದ ಪ್ರತಿ ಸೋಮವಾರ ಶಿವನ ದೇಗುಲಗಳಲ್ಲಿ ಶಿವನ ಆರಾಧನೆ, ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿವೆ. ವರಮಹಾಲಕ್ಷ್ಮೀ ಹಬ್ಬ, ನೂಲು ಹುಣ್ಣಿಮೆ, ಕೃಷ್ಣ ಜನ್ಮಾಷ್ಟಮಿ ಹೀಗೆ ಸಾಲು ಹಬ್ಬಗಳು ಶ್ರಾವಣದಲ್ಲೇ ಆಚರಿಸುವುದು ವಿಶೇಷ.

ಹುಬ್ಬಳ್ಳಿಯಲ್ಲೇ ನಾಲ್ಕೈದು ಕಡೆ ನಮ್ಮದು ಆಹಾರ ಮಳಿಗೆ ಇದೆ. ಪ್ರತಿಯೊಂದು ಅಂಗಡಿಯಲ್ಲೂ 11 ವಿಧದ ಉಂಡಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಉಂಡಿ ತಯಾರಿಸುವ ದಿನಸಿಗಳ ಬೆಲೆ ಹೆಚ್ಚಾಗಿದ್ದರೂ ನಾವು ಉಂಡಿಗಳ ಬೆಲೆ ಹೆಚ್ಚಿಸಿಲ್ಲ. ಪಂಚಮಿಗೆ ನಾವು ತಂಬಿಟ್ಟು ಸಹ ತಯಾರಿಸಿ ಮಾರುತ್ತೇವೆ. ಗೃಹಿಣಿಯರು ಮನೆಯಲ್ಲಿ ಉಂಡಿಗಳನ್ನು ತಯಾರಿಸುವಂತೆ ಪ್ರತಿಯೊಂದು ಹಂತದಲ್ಲೂ ಕಾಳಜಿ ತೆಗೆದುಕೊಂಡಿದ್ದೇವೆ ಎಂದು ಕೇಶ್ವಾಪುರದ ಸ್ವಾಮಿಫುಡ್ಸ್‌ ಮಾಲೀಕ ಚಂದ್ರಶೇಖರಯ್ಯ ಕುರಹಟ್ಟಿಮಠ ಹೇಳಿದ್ದಾರೆ.

ಹಬ್ಬಕ್ಕೆ ನಾನಾ ಬಗೆಯ ಉಂಡಿಗಳನ್ನು ತಯಾರಿಸಲು ಸಮಯ ಬಹಳ ಬೇಕು, ಹಿಂದಿನ ಹಿರಿಯರಂತೆ ಈಗಿನ ಹುಡಗರು ಸಿಹಿಯನ್ನು ಜಾಸ್ತಿ ತಿನ್ನುವುದಿಲ್ಲ. ಹೀಗಾಗಿ ಎರಡ್ಮೂರು ಬಗೆಯ ಉಂಡಿಗಳನ್ನು ಹೊರಗಡೆ ತಂದು ಹಬ್ಬ ಆಚರಣೆ ಮಾಡುತ್ತೇವೆ. ಮೇಲಾಗಿ ಉದ್ಯೋಗಸ್ಥ ಮಹಿಳೆಯರಿಗೆ ಹಬ್ಬದ ಅಡುಗೆಯ ತಯಾರಿ ಕೆಲಸವೇ ಹೆಚ್ಚಾಗುತ್ತದೆ. ಹೀಗಾಗಿ ಹೊರಗಡೆ ಉಂಡಿ ಕಟ್ಟುವವರಿಗಿಂತ ಖರೀದಿಸಿ ತರುವವರ ಸಂಖ್ಯೆ ಜಾಸ್ತಿಯಾಗಿದೆ ಎಂದು ಭವಾನಿನಗರದ ಗೃಹಿಣಿ ನಿರ್ಮಲಾ ಉಳ್ಳಾಗಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು