ವರುಣನ ಆರ್ಭಟಕ್ಕೆ ಹಲವೆಡೆ ಹಾನಿ

KannadaprabhaNewsNetwork |  
Published : Jun 10, 2024, 12:54 AM IST
ಕಾರವಾರ ತಾಲೂಕಿನ ಬಿಣಗಾದಲ್ಲಿ ಟಿಸಿ, ವಿದ್ಯುತ್ ಕಂಬ ಧರೆಗುರುಳಿರುವುದು. | Kannada Prabha

ಸಾರಾಂಶ

ಕಾರವಾರದಲ್ಲಿ ರಾತ್ರಿ ಆಗಾಗ ಬಿರುಸಿನಿಂದ ಮಳೆಯಾಗಿದೆ. ಮಧ್ಯಾಹ್ನದ ವರೆಗೂ ತುಂತುರು ಮಳೆಯಾಗಿದ್ದರೆ ಬಳಿಕ ಹನಿ ಕಡಿದಿತ್ತು.

ಕಾರವಾರ:

ಜಿಲ್ಲೆಯ ಕರಾವಳಿ ತಾಲೂಕಿನ ಕೆಲವೆಡೆ ಭಾನುವಾರ ಭಾರಿ ಮಳೆಯಾಗಿದೆ. ಮಲೆನಾಡಿನ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದರೆ ಭಟ್ಕಳದಲ್ಲಿ ಬೆಳಗ್ಗೆ ವೇಳೆ ಭಾರಿ ಮಳೆ ಬಿದ್ದಿದೆ. ಮಧ್ಯಾಹ್ನದ ವೇಳೆ ಬಿಡುವು ನೀಡಿತ್ತು. ಮುಂಡಗೋಡಿನಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆಯಾಗಿದೆ. ಜೋಯಿಡಾ, ದಾಂಡೇಲಿ, ಹಳಿಯಾಳ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಅಂಕೋಲಾದಲ್ಲಿ ನಸುಕಿನಲ್ಲಿ ಆಗಾಗ ಮಳೆಯಾಗಿದ್ದು, ಬೆಳಗ್ಗೆ ನಂತರ ಬಿಡುವು ನೀಡಿತ್ತು. ಕಾರವಾರದಲ್ಲಿ ಮಧ್ಯಾಹ್ನದ ವರೆಗೆ ತುಂತುರು ಮಳೆಯಾಗಿದ್ದು, ಬಳಿಕ ಬಿಡುವು ನೀಡಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಳೆ ಕಡಿಮೆಯಾಗಿದೆ.

ಕಾರವಾರದಲ್ಲಿ ರಾತ್ರಿ ಆಗಾಗ ಬಿರುಸಿನಿಂದ ಮಳೆಯಾಗಿದೆ. ಮಧ್ಯಾಹ್ನದ ವರೆಗೂ ತುಂತುರು ಮಳೆಯಾಗಿದ್ದರೆ ಬಳಿಕ ಹನಿ ಕಡಿದಿತ್ತು. ತಾಲೂಕಿನ ಬಿಣಗಾ ಮಾಳಸವಾಡದಲ್ಲಿ ನಸುಕಿನಲ್ಲಿ ಬೀಸಿದ ಭಾರಿ ಗಾಳಿಗೆ ಮರ ಉರುಳಿದ್ದು, ಸಮೀಪವಿದ್ದ ಟ್ರಾನ್ಸ್‌ಫಾರ್ಮರ್ ಸಹಿತ ವಿದ್ಯುತ್ ಕಂಬ ಚರಂಡಿಗೆ ಬಿದ್ದಿದೆ.

ಇದೇ ಮಾರ್ಗದಲ್ಲಿ ೫ ಕಂಬಗಳು ಧರಾಶಾಹಿಯಾಗಿವೆ. ಹೆಸ್ಕಾಂ ಸಿಬ್ಬಂದಿ ಭಾನುವಾರ ಮಧ್ಯಾಹ್ನ ಟಿಸಿ, ಕಂಬ ಬದಲಿಸುವ ಕೆಲಸವನ್ನು ಕೈಗೊಂಡರು. ಮಧ್ಯಾಹ್ನದ ವೇಳೆಗೆ ಮಳೆ ಕಡಿಮೆಯಾದ ಕಾರಣ ಚರಂಡಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಮಳೆ ಸತತ ಸುರಿದರೆ ನಗರದ ಕೆಲವು ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿಯುವ ಸಂದರ್ಭವಿತ್ತು.

ಮಳೆ ವಿವರ: ಶನಿವಾರ ಬೆಳಗ್ಗೆ ೮ ಗಂಟೆಯಿಂದ ಮುಂದಿನ ೨೪ ಗಂಟೆ ಅವಧಿಯಲ್ಲಿ ತಾಲೂಕಾವಾರು ಸುರಿದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾ ೧೦೨.೪ ಮಿಮೀ, ಭಟ್ಕಳ ೧೧೮.೨, ಹಳಿಯಾಳ ೧೧.೫, ಹೊನ್ನಾವರ ೮೦.೧, ಕಾರವಾರ ೧೦೮.೪, ಕುಮಟಾ ೬೬.೪, ಮುಂಡಗೋಡ ೧೯.೪, ಸಿದ್ದಾಪುರ ೬೫.೭, ಶಿರಸಿ ೫೪.೫, ಜೋಯಿಡಾ ೫೩.೫, ಯಲ್ಲಾಪುರ ೩೫.೪, ದಾಂಡೇಲಿ ೧೪.೮ ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಭಟ್ಕಳದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹಳಿಯಾಳದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಜೂ. ೧೦, ೧೧, ೧೨ರಂದು ಭಾರಿ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಕೆಸರುಮಯವಾದ ವಾರದ ಸಂತೆ ಮಾರುಕಟ್ಟೆ

ಭಟ್ಕಳ: ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ತಂಪಿನ ವಾತಾವರಣ ನಿರ್ಮಾಣವಾಗಿದೆ.ತಾಲೂಕಿನಲ್ಲಿ ಭಾನುವಾರ ಬೆಳಗ್ಗೆಯವರೆಗೆ 108.8 ಮಿಮೀ ಮಳೆಯಾಗಿದ್ದು, ಇಲ್ಲಿಯ ತನಕ 431 ಮಿಮೀ ಮಳೆ ಸುರಿದಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದ್ದರೆ, ಗಾಳಿಗೆ ಹಲವು ಕಡೆ ಮರಗಳು ಉರುಳಿವೆ.ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರಗದ್ದೆಯ ರಮೇಶ ಮಾದೇವ ನಾಯ್ಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ. ಭಾನುವಾರವೂ ಮಳೆಯ ಅಬ್ಬರ ಜೋರಾಗಿದ್ದು, ವಾರದ ಸಂತೆ ಅಸ್ತವ್ಯಸ್ತಗೊಂಡಿತು.

ಮಧ್ಯಾಹ್ನದ ಸಂದರ್ಭದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಖರೀದಿಗೆ ಬಂದವರು, ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು. ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಇಡೀ ಸಂತೆ ಮಾರುಕಟ್ಟೆ ಕೆಸರು ಮಯವಾಗಿದ್ದು ತಿರುಗಾಡಲು ಕಷ್ಟವಾಯಿತು. ವ್ಯಾಪಕ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿವೆ. ಬಾವಿ, ಹಳ್ಳ, ಕೆರೆ, ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ ಆಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ