ಕಲಬುರಗಿಯಲ್ಲಿ ಮುಂದುವರಿದ ವರುಣನ ಆರ್ಭಟ

KannadaprabhaNewsNetwork |  
Published : May 22, 2025, 12:48 AM IST
ಫೋಟೋ- ರೇನ್‌ 1, ರೇನ್‌ 2, ರನ್‌ 3ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ರಾಮನಗರ ಗ್ರಾಮದ ರೈತರಾದ ಖಂಡು ಕೋಕರೆ ಅವರ ಹೊಲದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ನೀರು ಮಡುಗಟ್ಟಿ ನಿಂತು ಆತಂಕ ಉಂಟಾಗಿರುವ ನೋಟ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಶುರುವಾಗಿರುವ ಮಳೆ ಬುಧವಾರವೂ ಹಾಗೇ ಮುಂದುವರಿದಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿದ್ದು, 2 ಗಂಟೆಗೂ ಹೆಚ್ಚಿನ ಅವಧಿ ಮಳೆ ಸುರಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಶುರುವಾಗಿರುವ ಮಳೆ ಬುಧವಾರವೂ ಹಾಗೇ ಮುಂದುವರಿದಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿದ್ದು, 2 ಗಂಟೆಗೂ ಹೆಚ್ಚಿನ ಅವಧಿ ಮಳೆ ಸುರಿದಿದೆ.

ಇತ್ತ ಅಫಜಲ್ಪುರ ಜೇವರ್ಗಿ, ಚಿತ್ತಾಪುರ, ಚಿಂಚೋಳಿ ಸೇರಿದಂತೆ ತಾಲೂಕಿನ ಹಲವೆಡೆ ಮಳೆ ಸುರಿದ ವರದಿಗಳಾಗಿವೆ. ಮಂಗಳವಾರ ಜಿಲ್ಲೆಯ ಅಫಜಲ್ಪುರ ತಾಲೂಕಿನ ಹಸರಗುಡಂಗಿಯಲ್ಲಿ 35 ಮಿಮೀ, ದರ್ಗಾಸಿರೂರದಲ್ಲಿ 30, ಚಿಂಚೋಳಿಯಲ್ಲಿ 31, ಪೋಲಕಪಲ್ಲಿಯಲ್ಲಿ 37, ನೀರಗುಡಿಯಲ್ಲಿ 29 ಮಿಮೀ ಮಳೆಯಾಗಿದೆ.

ಅಫಜಲ್ಪುರ- ಮಣ್ಣೂರ ಸಂಪರ್ಕ ರಸ್ತೆ ಮಳೆಯ ನೀರಿನಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಮಳೆ ನೀರು ರಭಸವಾಗಿ ಈ ಊರ ಮುಂದಿರುವ ಕಿರಿಹಳ್ಳ, ಹದರಿ ಹಳ್ಳದಲ್ಲಿ ಪ್ರವಹಿಸುತ್ತಿರುವುದರಿಂದ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಸಂಪರ್ಕ ಬಂದ್‌ ಆಗಿದೆ.

ಈತನ್ಮದ್ಯೆ ಈ ಸೇತುವೆಗಳ ದುರಸ್ಥಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ಅಗೆದು ಹಾಕಲಾಗಿದೆ. ಹೀಗಾಗಿ ಈ ಅಗೆತದಲ್ಲಿಯೂ ಗುಂಡಿಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು ರಸ್ತೆ ಸಂಚಾರಕ್ಕೆ ಗ್ರಹಣ ಅಣರುವಂತೆ ಮಾಡಿದೆ.

ಮಳೆ ಬಿರುಸಿನಿಂದ ಸುರಿಯುತ್ತಿರುವುದರಿಂದ ಹೊಲಗದ್ದೆಗಳಲ್ಲಿ 2 ರಿಂದ 3 ಅಡಿ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಅನೇಕ ಹೊಲಗಳಲ್ಲಿ ಮಳೆ ನೀರು ನಿಲ್ಲುವ ಮೂಲಕ ಮಿನಿ ಕೆರೆಗಳೇ ನಿರ್ಮಾಣವಾದಂತಾಗಿವೆ. ರಾಮನಗರ, ಮಣ್ಣೂರ, ಕರಜಗಿಗಳಲ್ಲಂತೂ ಮಳೆ ನೀರು ಹೊಲಗದ್ದೆಗಳನ್ನು ಆಪೋಷನ ಪಡೆಯುವಷ್ಟು ಸಂಗ್ರಹಗೊಂಡಿದ್ದರಿಂದ ರೈತರು ಹೊಲ ಹಸನು ಮಾಡೋದು ಹೇಗೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಇನ್ನೇನು ಮುಂಗಾರು ಮಳೆ ಹೊತ್ತು, ಹೊಲ ಹಸನು ಮಾಡುವ ಭರದಲ್ಲಿದ್ದ ರೈತರಿಗೆ ಕಳೆದ 3 ದಿನದಿಂದ ಬಿಟ್ಟು ಬಿಡದಂತೆ ಸುರಿಯುತ್ತಿರೋ ಮಳೆ ಭಾರೀ ಅಡಚಣೆ ತಂದೊಡ್ಡಿದೆ. ತೊಗರಿ ಕಟ್ಟಿಗೆ ಕಡಿದು ಪೇರಿಸಿ ನಾಶ ಮಾಡುವ ಕೆಲಸಕ್ಕೂ ಮಳೆ ವಾತಾವರಣ ಅಡಚಣೆ ಉಂಟು ಮಾಡಿದೆ.

ನಿಂಬೆ, ದ್ರಾಕ್ಷಿ, ಬಾಳೆ, ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳಿರುವ ಹೊಲಗದ್ದೆಗಳಲ್ಲಿ ಮಳೆ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಬೆಳೆ ಹಾನಿಯ ಬೀತಿ ಎದುರಾಗಿದೆ. ಮೊದಲೇ ಫಸಲು ಚೆನ್ನಾಗಿಲ್ಲವೆಂದು ಕಂಗಾಲಾಗಿರುವ ರೈತರ ಪಾಲಿಗೆ ಮುಂಗಾರು ಪೂರ್ವ ಅಕಾಲಿಕ ಮಳೆ ಆತಂಕದ ವಾತಾರಣ ಹುಟ್ಟು ಹಾಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!