ಮಲೆನಾಡಿನಲ್ಲಿ ವರುಣನ ಆರ್ಭಟ: 4 ದಿನ ಆರೆಂಜ್‌ - ರೆಡ್‌ ಅಲರ್ಟ್‌ ಘೋಷಣೆ

KannadaprabhaNewsNetwork |  
Published : Aug 18, 2025, 12:00 AM IST
ಜಿಲ್ಲಾಧಿಕಾರಿ ಮೀನಾ ನಾಗರಾಜ್  | Kannada Prabha

ಸಾರಾಂಶ

ಚಿಕ್ಕಮಗಳೂರು, ಕಾಫಿ ನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಧಾರಾಕಾರ ಮಳೆ ಸುರಿದಿದ್ದು ಮುಂಜಾಗ್ರತಾ ಕ್ರಮವಾಗಿ ಸೋಮವಾರ ಮಲೆನಾಡಿನ ಆರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳು । 6 ತಾಲೂಕುಗಳ ಶಾಲೆಗಳಿಗೆ ಸೋಮವಾರ ರಜೆ ಘೋಷಣೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿ ನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಧಾರಾಕಾರ ಮಳೆ ಸುರಿದಿದ್ದು ಮುಂಜಾಗ್ರತಾ ಕ್ರಮವಾಗಿ ಸೋಮವಾರ ಮಲೆನಾಡಿನ ಆರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಆವತಿ, ಜಾಗರ, ವಸ್ತಾರೆ, ಆಲ್ದೂರು ಹಾಗೂ ಖಾಂಡ್ಯ ಹೋಬಳಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ದಿನೇ ದಿನೇ ಮಳೆ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಆ. 17 ರಿಂದ 20ರವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್‌ - ರೆಡ್‌ ಅಲರ್ಟ್‌ ಘೋಷಿಸಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.

ಶನಿವಾರ ಸಂಜೆಯಿಂದ ಭಾನುವಾರವೂ ಕಳಸ, ಶೃಂಗೇರಿ, ಮೂಡಿಗೆರೆಯಲ್ಲಿ ಮಳೆ ಬೀಳುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಶೃಂಗೇರಿ ತಾಲೂಕಿನ ನೆಮ್ಮಾರ್‌, ಕೆರೆಕಟ್ಟೆ ಸುತ್ತ ಮುತ್ತ ವರುಣನ ಆರ್ಭಟ ಜೋರಾಗಿ ತುಂಗಾ ನದಿ ಪಾತ್ರದಲ್ಲಿರುವ ಅಡಕೆ, ತೆಂಗಿನ ತೋಟಗಳು, ಗದ್ದೆಗಳು ಜಲಾವೃತ ವಾಗಿವೆ. ಶೃಂಗೇರಿ ಪಟ್ಟಣದಲ್ಲಿ ವಿದ್ಯಾರಣ್ಯಪುರ, ಕುರುಬಗೇರಿ, ಭಾರತೀಪುರ- ಕೆವಿಆರ್‌ ವೃತ್ತ ಬೈಪಾಸ್‌ ರಸ್ತೆ, ಕಲ್ಕಟ್ಟೆ - ಗಾಂಧಿ ಮೈದಾನದ ತೂಗು ಸೇತುವೆ ಮುಳುಗಡೆಯಾಗಿದೆ. ಸಂಜೆ ವೇಳೆಗೆ ನದಿ ಪ್ರವಾಹ ಇನ್ನಷ್ಟು ಏರಿಕೆಯಾಗಿತ್ತು.

ಕುದುರೆಮುಖ ಸೇರಿದಂತೆ ಕಳಸ ತಾಲೂಕಿನಾದ್ಯಂತ ಮಳೆ ಜತೆಗೆ ಬಲವಾಗಿ ಗಾಳಿ ಬೀಸುತ್ತಿದೆ. ಹೀಗಾಗಿ ಧರೆ ಕುಸಿತ, ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಹಲವೆಡೆ ರಸ್ತೆ ಸಂಪರ್ಕ ಅಸ್ತವ್ಯಸ್ತವಾಗಿತ್ತು. ಸಂಸೆ, ಬಸ್ರಿಕಲ್‌ ಚೆಕ್‌ ಪೋಸ್ಟ್‌ ಬಳಿ ರಸ್ತೆಯ ಉದ್ದಕ್ಕೂ ಮರುಗಳು ಬಿದ್ದಿದ್ದವು. ಕೆಂಗನಕೊಂಡ - ತೋರಣ ಕಾಡು ನಡುವಿನ ರಸ್ತೆ ಸಂಚಾರ ಬಂದ್ ಆಗಿತ್ತು. ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮಾಗುಂಡಿ, ಬಾಳೆಹೊನ್ನೂರು ನದಿ ಪಾತ್ರದ ತೆಂಗಿನ ತೋಟಗಳಿಗೆ ನೀರು ನುಗ್ಗಿತ್ತು. ಕೊಪ್ಪದಲ್ಲು ಬಿಡುವಿಲ್ಲದೆ ಮಳೆಯಾದರೆ, ಎನ್.ಆರ್‌.ಪುರದಲ್ಲಿ ಬೆಳಿಗ್ಗೆಯಿಂದ ಸಣ್ಣದಾಗಿದ್ದ ಮಳೆ ಮಧ್ಯಾಹ್ನ ಮಳೆಯ ಅಬ್ಬರ ಜೋರಾಗಿತ್ತು. ರಾತ್ರಿಯೂ ಮುಂದುವರಿದಿತ್ತು.

ಮೂಡಿಗೆರೆ ತಾಲೂಕಿನಾದ್ಯಂತ ಮಳೆಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಣಕಲ್‌, ಗೋಣಿಬೀಡು ಸೇರಿದಂತೆ ಪಟ್ಟಣ ಪ್ರದೇಶದಲ್ಲೂ ಭಾನುವಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸೇರಿದಂತೆ ಮಲೆನಾಡಿನ ಭಾಗದಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಕಡೂರು, ತರೀಕೆರೆ ಹಾಗೂ ಅಜ್ಜಂಪುರಗಳಲ್ಲಿ ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆ ಒಟ್ಟಾರೆ ಜಿಲ್ಲೆಯ ಮಲೆನಾಡು ಮಳೆಯಿಂದ ತತ್ತರಿಸುತ್ತಿದೆ.ಎರಡು ಪಟ್ಟು ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 17 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಬಿದ್ದಿರುವ ಮಳೆ 34 ಮಿ.ಮೀ. ಅಂದರೆ, ಜಿಲ್ಲೆಯಾದ್ಯಂತ ಎರಡು ಪಟ್ಟ ಮಳೆ ಬಂದಿದೆ. ಜಿಲ್ಲೆಯ 9 ತಾಲೂಕುಗಳ ಪೈಕಿ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಯಾಗಿದೆ. ಹಾಗಾಗಿ ತುಂಗಾ ನದಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 17.3 ಮಿ.ಮೀ., ಕಡೂರು - 0.9, ಕೊಪ್ಪ - 108.1, ಮೂಡಿಗೆರೆ- 47.6, ಎನ್‌.ಆರ್‌.ಪುರ- 42.2, ಶೃಂಗೇರಿ- 131.7, ತರೀಕೆರೆ- 3.7, ಅಜ್ಜಂಪುರ- 2.5 ಹಾಗೂ ಕಳಸ ತಾಲೂಕಿನಲ್ಲಿ 61.3 ಮಿ.ಮೀ. ಮಳೆಯಾಗಿದೆ.

-- ಬಾಕ್ಸ್‌--ಆರೆಂಜ್-ರೆಡ್‌ ಅಲರ್ಟ್ ಘೋಷಣೆಚಿಕ್ಕಮಗಳೂರು: ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಹಿನ್ನೆಲೆ ಹವಾಮಾನ ಇಲಾಖೆಯಿಂದ ಆ.17 ರಿಂದ 20 ರವರೆಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರತೀ ಗಂಟೆಗೆ ಸುಮಾರು 40-50 ಕಿ.ಮೀ. ವೇಗದಲ್ಲಿ ನಿರಂತರ ಗಾಳಿ ಬೀಸುವ ಸಂಭವವಿದ್ದು, ಧರೆ, ಗುಡ್ಡ ಕುಸಿತ ಉಂಟಾಗುವ ಸಾಧ್ಯತೆಇದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಕ್ತ ಮುಂಜಾಗೃತಾ ಕ್ರಮ ವಹಿಸಬೇಕಿದೆ.ಸಾರ್ವಜನಿಕರು ಎಚ್ಚರ ವಹಿಸುವಂತೆ ಹಾಗೂ ರಾಜ್ಯದ ವಿವಿಧ ಸ್ಥಳಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ತೆರಳುವಾಗ ಹಾಗೂ ಚಾರಣಿಗರು ಟ್ರೆಕ್ಕಿಂಗ್ ಮಾಡುವಾಗ ಎಚ್ಚರಿಕೆ ವಹಿಸಿ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.17 ಕೆಸಿಕೆಎಂ 4

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌