ವರುಣಾರ್ಭಟ: ಶೃಂಗೇರಿಗೆ ಜಲದಿಗ್ಬಂಧನ

KannadaprabhaNewsNetwork |  
Published : Aug 18, 2025, 12:00 AM IST
ಮನನ | Kannada Prabha

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಅಬ್ಬರಿಸಿದ ಮಳೆಗೆ ತುಂಗಾನದಿಯಲ್ಲಿ ಉಂಟಾದ ಪ್ರವಾಹದಿಂದ ಇಡೀ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳು, ಗದ್ದೆ- ತೋಟಗಳು ಜಲಾವೃತವಾಗಿ ವಿವಿಧೆಡೆಗೆ ಸಂಪರ್ಕ ಕಡಿದು ಜಲದಿಗ್ಬಂಧನದಂತಹ ಪರಿಸ್ಥಿತಿ ಎದುರಾಗಿರುವ ಜತೆಗೆ ಅಲ್ಲಲ್ಲಿ ಗುಡ್ಡ, ಭೂಮಿ ಕುಸಿತ, ಮನೆಗಳ ಗೋಡೆ ಬಿದ್ದು, ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಬಂದ್ ಆಗಿ ಒಂದು ರೀತಿಯಲ್ಲಿ ಶೃಂಗೇರಿಗೆ ಜಲದಿಗ್ಬಂಧನವಾದಂತಾಗಿದೆ.

ತುಂಗೆಯಲ್ಲಿ ಪ್ರವಾಹ, ತಗ್ಗು ಪ್ರದೇಶಗಳು ಜಲಾವೃತ,ಗುಡ್ಡ ಕುಸಿತ ಸಂಚಾರ ಅಸ್ತವ್ಯಸ್ತ ...

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಅಬ್ಬರಿಸಿದ ಮಳೆಗೆ ತುಂಗಾನದಿಯಲ್ಲಿ ಉಂಟಾದ ಪ್ರವಾಹದಿಂದ ಇಡೀ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳು, ಗದ್ದೆ- ತೋಟಗಳು ಜಲಾವೃತವಾಗಿ ವಿವಿಧೆಡೆಗೆ ಸಂಪರ್ಕ ಕಡಿದು ಜಲದಿಗ್ಬಂಧನದಂತಹ ಪರಿಸ್ಥಿತಿ ಎದುರಾಗಿರುವ ಜತೆಗೆ ಅಲ್ಲಲ್ಲಿ ಗುಡ್ಡ, ಭೂಮಿ ಕುಸಿತ, ಮನೆಗಳ ಗೋಡೆ ಬಿದ್ದು, ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಬಂದ್ ಆಗಿ ಒಂದು ರೀತಿಯಲ್ಲಿ ಶೃಂಗೇರಿಗೆ ಜಲದಿಗ್ಬಂಧನವಾದಂತಾಗಿದೆ.

ಭಾರತೀ ಬೀದಿ ಕೆವಿಆರ್ ರಸ್ತೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಜಲಾವೃತದಿಂದ ಸಂಪರ್ಕ ಕಡಿತವಾದರೆ, ಮಂಗಳೂರು ಶಿವಮೊಗ್ಗ ರಾ.ಹೆ.169 ರ ಶೃಂಗೇರಿ ಆನೆಗುಂದ ಬಳಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದು ಶೃಂಗೇರಿ ಶಿವಮೊಗ್ಗ ಸಂಪರ್ಕ ಕೆಲಹೊತ್ತು ಬಂದ್ ಆಗಿತ್ತು. ಅಲ್ಲೆ ಇರುವ ಜೆಸಿಬಿಯಿಂದ ಮಣ್ಣು ಸರಿಸಿ ಸಂಚಾರ ಪುನರ್ ಆರಂಭಿಸಲಾಯಿತು.

ನೆಮ್ಮಾರು ಪಂಚಾಯಿತಿ ಹರೂರಿನಲ್ಲಿ ಭಾರಿ ಗಾಳಿ, ಮಳೆಗೆ ಪದ್ಮಾ ಎಂಬುವವರ ಮನೆ ಗೋಡೆ ಕುಸಿದು ಮನೆ ಸಂಪೂರ್ಣ ಜಖಂಗೊಂಡಿದೆ. ಆವೆಗುಂದ ಸಮೀಪ ಗುಡ್ಡದ ಮೇಲಿನ ಕೆಲ ಮನೆಗಳ ಗೋಡೆಗಳು ಕುಸಿದು ಬೀಳುತ್ತಿವೆ. ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತನಿಕೋಡು, ನೆಮ್ಮಾರು ಪ್ರದೇಶಗಳಲ್ಲಿ ತುಂಗಾನದಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳು, ಹೊಲಗದ್ದೆ, ತೋಟಗಳು ಜಲಾವೃತಗೊಂಡಿತ್ತು. ತುಂಗಾನದಿ ತೀರದ ಕಪ್ಪೆಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿ, ನರಸಿಂಹವನದ ತುಂಗಾನದಿ ತೀರದ ಸಂದ್ಯಾವಂದನಾ ಮಂಟಪಕ್ಕೂ ನೀರು ನುಗ್ಗಿದೆ. ಬೈಪಾಸ್ ರಸ್ತೆಗೆ ನೀರು ನುಗ್ಗಿದ್ದರಿಂದ ಗಾಂಧಿಮೈದಾನ ಅರ್ಧಮುಳುಗಡೆಯಾಗಿತ್ತು.

ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗುಸೇತುವೆ ಭಾಗಶಃ ಮುಳುಗಿ ಸಂಪರ್ಕ ಕಡಿತಗೊಂಡಿತ್ತು. ಸಹ್ಯಾದ್ರಿ ಪರ್ವತ ಶ್ರೇಣಿಗಳ ನರಸಿಂಹವನದ ತಪ್ಪಲಲ್ಲಿ ಆಗುತ್ತಿರುವ ಭಾರಿ ಮಳೆಯಿಂದ ತುಂಗಾ ನದಿ ಉಪನದಿಗಳಾದ ನಂದಿನಿ, ನಳಿನಿ, ಮಾಲತಿ ನದಿಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ತ್ಯಾವಣ ಕೆಎಸ್ ಆರ್ ಟಿಸಿ ಡಿಪೋ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯತ್ತ ಗುಡ್ಡದ ಮಣ್ಣು ಜಾರಿ ರಸ್ತೆ ಮೇಲೆ ಬೀಳುತ್ತಿದ್ದು ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಭತ್ತದ ಗೆದ್ದೆಗಳಲ್ಲಿ ನೀರು ತುಂಬಿದ್ದು ಕೆಲವೆಡೆ ಹಳ್ಳದ ದಂಡೆಗಳು ತುಂಡಾಗಿ ಗದ್ದೆಗಳು ನೀರಿನಿಂದ ಮುಳುಗಡೆಯಾಗಿವೆ. ನದಿ ತೀರದ ಭತ್ತದ ಗದ್ದೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಮರ ಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು, ಲೈನಗಳು ಮುರಿದು ಬೀಳುತ್ತಿವೆ ವಿದ್ಯುತ್ ಕಡಿತ, ರಸ್ತೆ ಸಂಚಾರ ಕಡಿತ ಗೊಳ್ಳುತ್ತಿದೆ. ಶನಿವಾರ ಬೆಳಿಗ್ಗೆಯಿಂದಲೂ ಒಂದೇ ಸಮನೆ ಸುರಿಯುತ್ತಿರುವ ಮಳೆ ಭಾನುವಾರವೂ ನಿರಂತರವಾಗಿ ಮುಂದುವರಿದು ಇಡೀ ತಾಲೂಕಿನಲ್ಲಿ ಜಲಪ್ರಳಯ ಸಾಕಷ್ಟು ಹಾನಿ ಮಾಡಿದ್ದು, ಜಲಪ್ರಳಯದಿಂದ ಜನತ್ತರಿಸುವಂತಾಗಿದೆ.

17 ಶ್ರೀ ಚಿತ್ರ 1-ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ಭಾರತೀ ಬೀದಿ ಶೃಂಗೇರಿ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ತುಂಗಾನದಿಯ ಪ್ರವಾಹದಲ್ಲಿ ಮುಳಗಿರುವುದು.

17 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಾನದಿ ಅಪಾಯದ ಮಟ್ಟಮೀರಿ ಹರಿಯುತ್ತಿರುವುದು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌