ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೂ ಇದರ ಜೊತೆಗೆ ಸೇರಿದೆ ಇದಕ್ಕೆ ತಾಜಾ ಉದಾಹರಣೆ ಎಂದರೆ ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಹಣದಿಂದ ಹಲವು ಬಡಾವಣೆಗಳಲ್ಲಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣಗಳನ್ನು ಇನ್ನೂ ಫಲಾನುಭವಿಗಳಿಗೆ ವಿತರಿಸದೆ ಬಾಡಿಗೆ ರೂಪದಲ್ಲಿ ಬರಬೇಕಾಗಿದ್ದ ಕೋಟ್ಯಾಂತರ ರು.ಹಣ ಪಾಲಿಕೆಗೆ ನಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಪ್ಪನಾಯಕ ಹೂವಿನ ಮಾರುಕಟ್ಟೆಯ ಸಂಕೀರ್ಣದಲ್ಲಿ 118 ಮಳಿಗೆಗಳಿವೆ. ಪಾಲಿಗೆಗೆ ಹಸ್ತಾಂತರಗೊಂಡು 2 ವರ್ಷಗಳಾಗಿವೆ. ಒಂದು ಮಳಿಗೆಗೆ 5 ಸಾವಿರ ರು. ಎಂದುಕೊಂಡರೂ ಈ ಎರಡು ವರ್ಷಗಳಲ್ಲಿ 1.41 ಕೋಟಿಯಷ್ಟು ನಷ್ಟವಾಗಿದೆ. ಜೊತೆಗೆ 23 ತಿಂಗಳ ಬಾಡಿಗೆ ಮುಂಗಡ 1.35 ಕೋಟಿ ರು. ಕೂಡ ಇಲ್ಲವಾಗಿದೆ, ಹಾಗೆಯೇ ಗಾರ್ಡನ್ ಏರಿಯಾ ವಾಣಿಜ್ಯ ಸಂಕೀರ್ಣದಲ್ಲಿ 98 ಮಳಿಗೆಗಳಿದ್ದು, ಹಸ್ತಾಂತರಗೊಂಡು 5 ವರ್ಷಗಳಾಗಿವೆ ಇಲ್ಲಿಯೂ ಕೂಡ ಸುಮಾರು 5.8 ಕೋಟಿ ಬಾಡಿಗೆ ನಷ್ಟವಾಗಿದೆ. 2.25 ಕೋಟಿಯಷ್ಟು ಮುಂಗಡ ಹಣ ಇಲ್ಲವಾಗಿದೆ. ಹಾಗೆಯೇ ಗಾಂಧಿನಗರದ ವಾಣಿಜ್ಯ ಸಂಕೀರ್ಣದಲ್ಲಿ 13 ಮಳಿಗೆಗಳು ನಿರ್ಮಾಣವಾಗಿದ್ದು, ಹಸ್ತಾಂತರಗೊಂಡು 2 ವರ್ಷಗಳೇ ಕಳೆದಿವೆ. ಅಲ್ಲಿಯೂ ಕೂಡ ಸುಮಾರು 31 ಲಕ್ಷದಷ್ಟು ಬಾಡಿಗೆ ಇಲ್ಲವಾಗಿದೆ. 29 ಲಕ್ಷದಷ್ಟು ಮುಂಗಡ ಹಣವೂ ಇಲ್ಲವಾಗಿದೆ. ಒಟ್ಟಾರೆ 229 ಮಳಿಗೆಗಳಿಂದ 11.51 ಕೋಟಿಯಷ್ಟು ಮಹಾನಗರ ಪಾಲಿಕೆಗೆ ಬಾಡಿಗೆ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ರು. ಹಣ ನಷ್ಟವಾಗಿದೆ ಎಂದರು.ಇದರ ಜೊತೆಗೆ ಖಾಸಗಿ ಬಸ್‌ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಿರುವ ಕಟ್ಟಡವೂ ಸಹ ಪೂಣಗೊಂಡಿದ್ದು, ಇಲ್ಲಿಯವರೆಗೂ ನೋಂದಾಯಿತ ಬೀದಿ ವ್ಯಾಪಾರಿಗಳಿಗೆ ಹಸ್ತಾಂತರಿಸಿಲ್ಲ. ಒಟ್ಟಾರೆ ಸುಮಾರು 500 ಕುಟುಂಬಗಳು ಬಾಡಿಗೆ ಕೊಟ್ಟಿದ್ದರೆ ಅವರಿಗೆ ದುಡಿಮೆಯಾಗುತ್ತಿತ್ತು ಈ ದುಡಿಮೆಯನ್ನು ಕೂಡ ಪಾಲಿಕೆ ಕಸಿದುಕೊಂಡು ಬಡವರ ಪಾಲಿಗೆ ನರಕವಾಗಿದೆ ಎಂದರು.
ಜೊತೆಗೆ ಈ ಸ್ವತ್ತು ವ್ಯವಸ್ಥೆಯಲ್ಲೂ ಕೂಡ ಬಾರಿ ಭ್ರಷ್ಟಾಚಾರ ನಡೆಯುತ್ತಿದೆ. ಆಯುಕ್ತರೇ ನೇರವಾಗಿ ಏಜೆಂಟರುಗಳನ್ನು ನೇಮಿಸಿಕೊಂಡು ಅವರ ಮುಖಾಂತರ ಹೋದವರಿಗೆ ಮಾತ್ರ ಇ-ಸ್ವತ್ತು ಸಿಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದು ಕೂಡ ತನಿಖೆಯಾಗಬೇಕಾಗಿದೆ. ಆಶ್ರಯ ಯೋಜನೆಯ ಮನೆಗಳಿಗಾಗಿ ಬಡವರು ಸಾಲಮಾಡಿ ಸರ್ಕಾರಕ್ಕೆ ಹಣ ಕಟ್ಟಿದ್ದಾರೆ. ಆದರೂ ಸಹ ಇಲ್ಲಿಯವರೆಗೆ ಮನೆಗಳ ಹಂಚಿಕೆ ಸರಿಯಾಗಿ ಆಗಿಲ್ಲ. ಜೊತೆಗೆ ರಸ್ತೆಗಳೆಲ್ಲಾ ಗುಂಡಿಬಿದ್ದಿವೆ. ಕುಡಿಯುವ ನೀರಿನ ಸಮಸ್ಯೆಯಂತೂ ಎಲ್ಲಾ ವಾರ್ಡಿನಲ್ಲೂ ಕಂಡು ಬರುತ್ತಿದೆ. 24X7 ಸರಬರಾಜು ಬಂದ ಮೇಲೆ ಜನರು ತೊಂದರೆಗೆ ಒಳಗಾಗಿದ್ದಾರೆ. ಜೊತೆಗೆ ಬೀದಿನಾಯಿಗಳ ಕಾಟ, ಬೀದಿ ದೀಪಗಳ ತೊಂದರೆ, ಸ್ವಚ್ಛತೆ ಇಲ್ಲ ಹೀಗೆ ಇಡೀ ಮಹಾನಗರ ಪಾಲಿಕೆ ನಿರ್ಲಕ್ಷ್ಯದ ಕೂಪವಾಗುವುದರ ಜೊತೆಗೆ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರ ಹಾಕುತ್ತಿದೆ ಎಂದರು.ಪಾಲಿಕೆಗೆ ಮುತ್ತಿಗೆ: ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ಈಗಾಗಲೇ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣಗಳ ಮಳಿಗೆಗಳನ್ನು ನಿಯಮಗಳ ಆಧಾರದಲ್ಲಿ ಬಾಡಿಗೆ ನೀಡಬೇಕು ಇಲ್ಲದಿದ್ದರೆ ಜನವರಿ 2ರಂದು ರಾಷ್ಟ್ರಭಕ್ತರ ಬಳಗದಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಮತ್ತು ಅಹೋರಾತಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು ಮತ್ತು ಶಾಸಕರು ಕೂಡ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾದವ್, ಸುವರ್ಣಾಶಂಕರ್, ರಾಜಣ್ಣ, ಆ.ಮ. ಪ್ರಕಾಶ್, ಶಂಕ್ರಾನಾಯ್ಕ, ಕುಬೇರಪ್ಪ, ನಾಗರಾಜ್, ಗೋವಿಂದ್, ರಾಜು ಸೇರಿದಂತೆ ಹಲವರಿದ್ದರು.