ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರ , ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬೆಂಗಳೂರು ಮಹಾನಗರ ಪಾಲಿಕೆಯನ್ನು ಸಮಾಧಿ ಮಾಡಿ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಅಲ್ಲಿ ಪಾಳೆಗಾರರು ಹೇಳಿದಂತೆ ನಡೆಯುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ರಾಜಧಾನಿಯ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ರಿಯಲ್ ಎಸ್ಟೇಟ್ ನವರು ಮತ್ತು ಲೂಟಿ ಕೋರರಿಗೆ ಮಾತ್ರ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಜನ ಸಾಮಾನ್ಯರ ಬದುಕು ಮತ್ತಷ್ಟು ದುಸ್ಥರವಾಗಲಿದೆ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರದ ಕೈಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಕಸವನ್ನು ತೆರವು ಮಾಡಲು ಆಗುತ್ತಿಲ್ಲ. ರಾಜಕಾಲುವೆಗಳನ್ನು ಸರಿಪಡಿಸಲು ಆಗುತ್ತಿಲ್ಲ. ಮನೆಗಳಿಗೆ ಮೋರಿ ನೀರು ನುಗ್ಗುವುದನ್ನು ನಿಲ್ಲಿಸಲು ಆಗುತ್ತಿಲ್ಲ. ಮಾಡುವ ಕೆಲಸಗಳನ್ನು ಬಿಟ್ಟು, ಭೂಗಳ್ಳರಿಗೆ ಅನುಕೂಲ ಮಾಡಿಕೊಡಲು ಪ್ರಯೋಜನವಿಲ್ಲದ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ ಎಂದರು.
ಮೇಯರ್ ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಕೂರುವುದು ಆ ಹುದ್ದೆಗೆ ಶೋಭೆ ಅಲ್ಲ. ಸಿದ್ದರಾಮಯ್ಯ ಅವರಿಗೆ ಇತ್ತೀಚಿನ ದಿನಗಳಲ್ಲಿ ಬದ್ಧತೆ ಕಡಿಮೆಯಾಗುತ್ತಿದೆ. ಯಾರು ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಏನೋ ಒಂದು ನಡೆಯಲಿ ಎಂದು ದಿನಗಳನ್ನು ದೂಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಸಹ ಯಾರ ಮಾತು ಕೇಳುತ್ತಿಲ್ಲ. ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ನಾನು ಅಂದುಕೊಂಡಿದ್ದು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಎಂದು ದೂರಿದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದೇ ಸಾಕು. ಅದನ್ನು ಐದಾರು ಭಾಗ ಮಾಡುವುದು ಬೇಕಾಗಿರಲಿಲ್ಲ. ಗ್ರೇಟರ್ ಬೆಂಗಳೂರು ಬೇಕಾಗಿರಲಿಲ್ಲ ಎಂದು ಸಿದ್ದರಾಮಯ್ಯ ಅವರೇ ವಿರೋಧಿಸಬೇಕಾಗಿತ್ತು. ಕೆಂಪೇಗೌಡರು ಕಟ್ಟಿನ ನಗರ ಒಂದೇ ಆಗಿರಬೇಕು. ಬೆಂಗಳೂರು ನಗರವನ್ನು ಭಾಗ ಮಾಡುವುದರಿಂದ ಮಾತ್ರ ಅಭಿವೃದ್ಧಿ ಆಗುವುದಿಲ್ಲ ಎಂದು ಟೀಕಿಸಿದರು.
ಬಿಡದಿ ಬಳಿ ನಿರ್ಮಿಸುತ್ತಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ರಿಯಲ್ ಎಸ್ಟೇಟ್ ನವರಿಗೆ ಅನುಕೂಲ ಮಾಡಲು ಸರ್ಕಾರ ಇದನ್ನು ಮಾಡುತ್ತಿದೆ. ಇದರಿಂದ ರೈತರು ಬೀದಿಗೆ ಬೀಳುತ್ತಾರೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಒಂದೇ ಒಂದು ಅಡಿ ಭೂಮಿಯೂ ಸ್ವಾಧೀನ ಆಗಲು ಬಿಡಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.ಪ್ರತಿಭಟನೆಯಲ್ಲಿ ಕರುನಾಡ ಸೇವೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಪದಾಧಿಕಾರಿಗಳಾದ ಗಂಗಾಧರ್, ಭಾಗ್ಯ, ಸುಧಾ, ಕೆ.ಜಯರಾಜು, ಅರ್ಜುನ್, ಮುದ್ದುಮಲ್ಲಯ್ಯ, ಸಂತೋಷ್ ಗೌಡ, ಕುಮಾರ್, ಶಿವಮೂರ್ತಿ, ಕೆಂಪರಾಜು, ಮಂಜುನಾಥ್, ಕೃಷ್ಣಮೂರ್ತಿ, ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.