ರಾಮನಗರ: ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಳಿಗೆ ಕಪ್ಪು ಪಟ್ಟಿ ಹಾಕಿಕೊಂಡು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ , ನಮಗೆ ಸಾರಿಗೆ ನೌಕರರ ಬಗ್ಗೆ ಬಹಳ ಗೌರವ ಇದೆ. ಇದು ಅವರ ಬಹಳ ವರ್ಷಗಳ ಬೇಡಿಕೆಯಾಗಿದೆ. 36 ತಿಂಗಳ ಸಂಬಳ ಇಟ್ಟುಕೊಂಡರೆ ಅವರ ಜೀವನ ನಡೆಯುವುದು ಹೇಗೆ. ಅವರ ಹಳೆಯ ಸಂಬಳವನ್ನು ರಾಜ್ಯ ಸರ್ಕಾರ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡಲೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ನೌಕರರ ಜೊತೆ ಸೇರಿ ಹೋರಾಟ ನಡೆಸುವುದರ ಜೊತೆಗೆ ಕರ್ನಾಟಕ ಬಂದ್ ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಹಾಗೂ ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಬಿಜೆಪಿಯವರೇ ನಿಜವಾದ ಶತ್ರುಗಳಾಗಿ ಅಡ್ಡಿಯಾಗಿದ್ದಾರೆ. ಈ ಯೋಜನೆಗಳನ್ನು ಪ್ರತಿಯೊಬ್ಬ ರಾಜಕಾರಣಿ ಹಾಗೂ ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ರಾಜಕೀಯ ವಸ್ತುಗಳಾಗಿ ಬಳಸಿಕೊಳ್ಳುತ್ತಿವೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.
ಮೇಕೆದಾಟು ಯೋಜನೆ ಜಾರಿಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಂಚತಾರಾ ಪಾದಯಾತ್ರೆ ನಡೆಸಿದರು. ಅದರಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈಗ ಕೇಂದ್ರ ಸರ್ಕಾರ ಮೇಕೆದಾಟಿಗೆ ಅನುಮತಿ ಕೊಡಿಸಲಿ ನಾವು ಮಾಡುತ್ತೇವೆ ಎಂದು ಹೇಳಿ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಕರುಣಾನಿಧಿ, ಜಯಲಲಿತಾ ಬಳಿಕ ಈಗ ಸ್ಟಾಲಿನ್ ಯೋಜನೆಗೆ ವಿರೋಧ ಮುಂದುವರಿಸಿದ್ದಾರೆ. ಸ್ಟಾಲಿನ್ ಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಆದ್ದರಿಂದ ರಾಹುಲ್ ಗಾಂಧಿ ಅವರೊಂದಿಗೆ ಸ್ಟಾಲಿನ್ ಅವರನ್ನು ಒಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಮಾಣಿಕವಾಗಿ ಮಾಡಿದರೆ ಯೋಜನೆ ಸುಲಭವಾಗಿ ಜಾರಿಯಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ ತಾಲೂಕು ಅಧ್ಯಕ್ಷ ವಿ.ಎನ್.ಗಂಗಾಧರ್, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯ ಸುಧಾ, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ.ಜಯರಾಮು, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕ ಅಧ್ಯಕ್ಷ ಪ್ರಸನ್ನ, ಸಹ ಕಾರ್ಯದರ್ಶಿ ಪಿ.ಸುರೇಶ್, ವಾಟಾಳ್ ಪಕ್ಷದ ಮುಖಂಡ ನಾರಾಯಣಸ್ವಾಮಿ, ಮಹದೇವ್, ಪಾರ್ತಸಾರಥಿ ಮತ್ತಿತರರು ಭಾಗವಹಿಸಿದ್ದರು.
ರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪ ಸಂಘಟನೆಗಳ ಕಾರ್ಯಕರ್ತರು ಕೊರಳಿಗೆ ಕಪ್ಪು ಬಟ್ಟೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು.