ವಿಬಿಜಿ ರಾಮ್ ಜಿ ಯೋಜನೆ ಕಾರ್ಯಕ್ರಮ ಅರ್ಧಕ್ಕೆ ಮೊಟಕು..!

KannadaprabhaNewsNetwork |  
Published : Jul 03, 2026, 01:45 AM IST
2ಕೆಎಂಎನ್ ಡಿ19,20 | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಗ್ರಾಮೀಣ್ ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯೋಜನೆಯ ಉದ್ಘಾಟನಾ ಸಭೆ ಅರ್ಧಕ್ಕೆ ಮೊಟಕುಗೊಂಡ ಘಟನೆ ತಾಲೂಕಿನ ಆತಗೂರು ಗ್ರಾಮದಲ್ಲಿ ಗುರುವಾರ ಜರುಗಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಗ್ರಾಮೀಣ್ ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯೋಜನೆಯ ಉದ್ಘಾಟನಾ ಸಭೆ ಅರ್ಧಕ್ಕೆ ಮೊಟಕುಗೊಂಡ ಘಟನೆ ತಾಲೂಕಿನ ಆತಗೂರು ಗ್ರಾಮದಲ್ಲಿ ಗುರುವಾರ ಜರುಗಿತು.

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಆತಗೂರು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಗ್ರಾಮದ ಕೆರೆಯಂಗಳದಲ್ಲಿ ಬದಲಾದ ನರೇಗಾ ಯೋಜನೆಯ ವಿಬಿಜಿ ರಾಮ್ ಜಿ ಯೋಜನೆಯನ್ನು ಆತಗೂರು ಗ್ರಾಮದಿಂದ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟನೆಗೆ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಆಯುಕ್ತೆ ಜಿ.ಆರ್.ಜೆ ದಿವ್ಯ ಪ್ರಭು ಆಗಮಿಸಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಅವರೊಂದಿಗೆ ಆಗಮಿಸಿದ ದಿವ್ಯ ಪ್ರಭು ಆಂಧ್ರಪ್ರದೇಶದ ತಿರುಪತಿಯಲ್ಲಿ ರಾಮ್ ಜಿ ಯೋಜನೆಯ ಉದ್ಘಾಟನೆಯನ್ನು ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಿದರು.

ದಿವ್ಯ ಪ್ರಭು ಅವರು ಯೋಜನೆಯ ಉದ್ಘಾಟನೆಗೆ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದ್ದರು. ಮಧ್ಯಾಹ್ನ 1.30 ಗಂಟೆ ಕಳೆದರೂ ಸಹ ಸರ್ಕಾರದ ಅನುಮತಿ ಸಿಗದ ಕಾರಣ ಉದ್ಘಾಟನಾ ಕಾರ್ಯಕ್ರಮ ಮೊಟಕುಗೊಳಿಸಿದ ದಿವ್ಯ ಪ್ರಭು, ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ನಿರ್ಗಮಿಸಿದರು.

ಯೋಜನೆ ಸದುಪಯೋಗಪಡಿಸಿಕೊಳ್ಳಿ: ಜಿ.ಆರ್.ಜೆ.ದಿವ್ಯ ಪ್ರಭು

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ ಎಂಬ ನೂತನ ಯೋಜನೆಯನ್ನು ಜು.1ರಿಂದ ಜಾರಿಗೆ ತಂದಿದ್ದು, ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಜಿ.ಆರ್‌ಜಿ.ದಿವ್ಯ ಪ್ರಭು ಕರೆ ನೀಡಿದರು.

ತಾಲೂಕಿನ ಆತಗೂರು ಕೆರೆ ಆವರಣದಲ್ಲಿ ಕೂಲಿಕಾರರನ್ನುದ್ದೇಶಿಸಿ ಮಾತನಾಡಿ, ಈ ಹಿಂದೆ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ನೀಡಲಾಗಿದ್ದ ಗುರುತಿನ ಚೀಟಿಯನ್ನು ಮಾರ್ಪಾಡು ಮಾಡಿ ರೋಜ್ಗಾರ್ ಗ್ಯಾರಂಟಿ ಕಾರ್ಡ್ ನೀಡಲು ಯೋಜಿಸಲಾಗಿದೆ. ಯೋಜನೆಯಡಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತರಿ ಜೊತೆಗೆ 382 ರು. ಕೂಲಿ ಹಣ ಪಾವತಿಸಲಾಗುವುದು ಎಂದರು.

ಆಂಧ್ರಪ್ರದೇಶದ ತಿರುಪತಿಯಲ್ಲಿ ಬುಧವಾರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದ ನೇರಪ್ರಸಾರದ ಮೂಲಕ ಎಲ್ಲಾ ರಾಜ್ಯಗಳು ಕೂಡ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂದರು.

ಈ ವೇಳೆ ಜಿಪಂ ಸಿಇಒ ಕೆ.ಆರ್.ನಂದಿನಿ, ಉಪ ಕಾರ್ಯದರ್ಶಿ ಲಕ್ಷ್ಮೀ, ತಾಪಂ ಇಒ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ ಟಿ.ವಿ. ಮಂಜುನಾಥ್, ತಾಲೂಕು ಯೋಜನಾಧಿಕಾರಿ ಸುರೇಶ್, ಸಂಯೋಜಕ ರಮೇಶ್, ಪಿಡಿಒ ಶಶಿಕುಮಾರ್ ಸೇರಿದಂತೆ ಹಲವರಿದ್ದರು.ಮುಖ್ಯಾಂಶಗಳು

- ಉದ್ಘಾಟನೆಗೆ ಬಂದ ಪಂಚಾಯತ್‌ರಾಜ್ ಆಯುಕ್ತೆ ಜಿ.ಆರ್.ಜಿ. ದಿವ್ಯಪ್ರಭು ವಾಪಸ್

- ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ಕುಳಿತ ಆಯುಕ್ತೆ; ಅರ್ಧಕ್ಕೆ ಮೊಟಕು

- ಮದ್ದೂರು ತಾಲೂಕು ಆತಗೂರು ಕೆರೆ ಪುನರುಜ್ಜೀವನ ಕಾಮಗಾರಿಗೆ ಸಿಗದ ಚಾಲನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಶ್ರೇಷ್ಠ : ಸೋಮಶೇಖರ್‌
ಬಂಡೀಪುರ ಸಫಾರಿ ಕೇಂದ್ರ, ಶಾಲೆ ದೇಗುಲಕ್ಕೆ ಡೀಸಿ ಭೇಟಿ: ಪರಿಶೀಲನೆ