ಸಮಾಜದ ಕಲ್ಮಶ ನಿವಾರಣೆಗೆ ವೇದ ಅಗತ್ಯ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಇತ್ತೀಚೆಗೆ ಪರಿಸರವೂ ಸಹ ನಗರೀಕರಣ, ಕಾರ್ಖಾನೆಗಳಿಂದ ಕಲ್ಮಶವಾಗುತ್ತಿವೆ. ಇದರಿಂದ ಓಝೋನ್ ಪದರದಲ್ಲಿ ರಂಧ್ರಗಳಾಗುತ್ತಿವೆ. ಯಜ್ಞಗಳಿಂದ ಈ ರಂಧ್ರಗಳನ್ನು ಸರಿಪಡಿಸಬಹುದು ಸಾಧ್ಯ.

ಶಿರಸಿ:

ಸಮಾಜ ಹರಿಯುವ ನದಿಯಾಗಿದ್ದು ಇದಕ್ಕೆ ಆಗಾಗ ಕಲ್ಮಶ ಸೇರ್ಪಡೆಗೊಳ್ಳುತ್ತವೆ. ಇದನ್ನು ಶುದ್ಧೀಕರಿಸುವುದು ವೇದಗಳಿಂದ ಮಾತ್ರ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಸೋಮವಾರ ನಡೆದ ದಕ್ಷಿಣ ಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ವೇದ ಮತ್ತು ಅವುಗಳ ಜತೆ ಇರುವ ಶಾಸ್ತ್ರಗಳ ರಕ್ಷಣೆ ಇಂದಿನ ಅಗತ್ಯತೆಯಾಗಿದೆ ಎಂದರು.ಇತ್ತೀಚೆಗೆ ಪರಿಸರವೂ ಸಹ ನಗರೀಕರಣ, ಕಾರ್ಖಾನೆಗಳಿಂದ ಕಲ್ಮಶವಾಗುತ್ತಿವೆ. ಇದರಿಂದ ಓಝೋನ್ ಪದರದಲ್ಲಿ ರಂಧ್ರಗಳಾಗುತ್ತಿವೆ. ಯಜ್ಞಗಳಿಂದ ಈ ರಂಧ್ರಗಳನ್ನು ಸರಿಪಡಿಸಬಹುದು ಸಾಧ್ಯ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದ ಶ್ರೀಗಳು, ಇತಿಹಾಸ ಮತ್ತು ಪುರಾಣಗಳ ಮೂಲಕವೇ ವೇದಗಳನ್ನು ನೋಡಬೇಕು. ತಿಳಿದ ವ್ಯಕ್ತಿಗಳೊಂದಿಗೆ ಚರ್ಚೆ ಮಾಡುವುದರಿಂದ ನಮಗೆ ಜ್ಞಾನ ಹೆಚ್ಚುತ್ತದೆ. ವೇದ ಪರಂಪರೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ದಾಟಿಸಬೇಕಾದುದು ಎಲ್ಲ ವಿದ್ವಾಂಸರ ಜವಾಬ್ದಾರಿಯಾಗಿದ್ದು ಅದೇ ರೀತಿ ವೇದಗಳ ಸಂರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿಯೂ ದೊಡ್ಡದಾಗಿದೆ ಎಂದು ಹೇಳಿದರು.ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಅಭಿನವ ಶಂಕರ ಭಾರತೀ ಸ್ವಾಮೀಜಿ ಮಾತನಾಡಿ, ಎನ್‌ಇಟಿ ಶಿಕ್ಷಣ ಪದ್ಧತಿ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವಿದ್ವಾಂಸರು ಇರಬಾರದು. ಈ ಶಿಕ್ಷಣ ಪದ್ಧತಿಯ ಬಗ್ಗೂ ಪರಾಮರ್ಶೆ ಮಾಡಬೇಕು ಎಂದರು. ಉಜ್ಜಯನಿಯ ಸಂಸ್ಕೃತ ವಿದ್ವಾಂಸ ಪ್ರಫುಲ್ಲಕುಮಾರ ಮಿಶ್ರಾ ಮಾತನಾಡಿ, ಇಂದು ಆಧುನಿಕ ಶಿಕ್ಷಣ ಅಗತ್ಯ. ಅದನ್ನು ಕಲಿಯೋಣ, ಆದರೆ ನಮ್ಮ ಮೂಲ ಜ್ಞಾನವನ್ನು ಎಂದಿಗೂ ಮರೆಯಬಾರದು ಎಂದರು.ಉಜ್ವಯನಿಯ ವಿದ್ವಾಂಸ ವಿರೂಪಾಕ್ಷ ಜಡ್ಡಿಪಾಲ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ನೋಡಿದರೂ ವೇದಾಧ್ಯನ ಅವಕಾಶಗಳು ಸಂಕುಚಿತಗೊಂಡಿದೆ. ವೇದದ ಅಧ್ಯಯನ ಕಡಿಮೆ ಆದಂತೆ ದೇಶದ ಸುರಕ್ಷತೆಗೂ ಅಡಚಣೆಯಾಗಿದೆ. ಭಾರತೀಯ ಜ್ಞಾನ ಪರಂಪರೆಗೆ ಮೂಲ ವೇದ. ಭಾರತ ಒಂದು ಕಾಲದಲ್ಲಿ ಜ್ಞಾನದ ಮೂಲವಾಗಿತ್ತು. ಜ್ಞಾನ ಮತ್ತು ಪ್ರಯೋಗ ನಮ್ಮ ಮೂಲ ತಂತ್ರವಾಗಿತ್ತು. ಜ್ಞಾನ ಸಮುದ್ರದ ಆಚೆಯ ದೇಶಗಳಿಂದ ಬಂದಿದೆ ಎಂಬ ನಮ್ಮ ಭ್ರಮೆಯನ್ನು ದೂರಗೊಳಿಸಬೇಕಿದೆ ಎಂದರು.ಬೆಂಗಳೂರಿನ ವೇದಬ್ರಹ್ಮ ಗೋವಿಂದಪ್ರಕಾಶ ಘನಪಾಠಿ, ವೇದಬ್ರಹ್ಮ ಕುಂಜಬಿಹಾರಿ ಉಪಾಧ್ಯಾಯ ಅವರನ್ನು ಸ್ವರ್ಣವಲ್ಲೀ ಶ್ರೀಗಳು ಸನ್ಮಾನಿಸಿದರು. ಮಠದ ಉಪಾಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ ಇದ್ದರು.

Share this article