ಕನ್ನಡಪ್ರಭ ವಾರ್ತೆ ಮೈಸೂರು
ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಅವರನ್ನು ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ - 2024 ಯನ್ನು ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಶಸ್ತಿಯನ್ನು ಮೇ 28ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ಕಲಾಮಂದಿರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪಾಲ್ಗೊಳ್ಳುವರು. ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್ ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 3 ಸಾವಿರ, ತೃತೀಯ ಬಹುಮಾನವಾಗಿ 1000 ನಗದು ಬಹುಮಾನದ ಜೊತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.ಸಾವರ್ಕರ್ ಕುರಿತು ಅನೇಕ ಅಧ್ಯಯನ ಮಾಡಿ ಕೃತಿ ರಚಿಸಿರುವ ವಿಕ್ರಂ ಸಂಪತ್ ಅವರಿಗೆ ಕಳೆದ ವರ್ಷ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ- 2023ಯನ್ನು ನೀಡಲಾಗಿತ್ತು.
ಈ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹಿತಿಗೆ ರಾಕೇಶ್ಭಟ್ ಮೊ. 99162 21184, ರಜತ್ 63634 43699, ಶಿವಕುಮಾರ್ 86602 19746 ಸಂಪರ್ಕಿಸಬುಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯರಾದ ಶಿವಕುಮಾರ್ ಚಿಕ್ಕಕಾನ್ಯ, ಕೆ.ಎಂ. ನಿಶಾಂತ್, ಟಿ.ಎಸ್. ಅರುಣ್ ಹಾಗೂ ಟಿ.ಪಿ. ಮಧುಸೂದನ್ ಇದ್ದರು.