ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಥೋತ್ಸವದ ನಿಮಿತ್ತ ಗ್ರಾಮದಲ್ಲಿ ನಿತ್ಯವೂ ಒಂದಷ್ಟು ರಥ ನಿರ್ಮಾಣ, ರಂಗಕುಣಿತ ಪ್ರದರ್ಶನ ಜರುಗಿತು. ಅಂತಿಮವಾಗಿ ರಥೋತ್ಸವದ ಬುಧವಾರ ರಥದ ಗಾಲಿಯನ್ನು ಒಂದೆಡೆ ಸೇರಿಸಿ ಸಿದ್ಧತೆ ಮಾಡಿಕೊಂಡರು.
ಹೊಸ ಮರದ ಪಟ್ಟಿಗಳನ್ನು ತಯಾರಿಸಿಕೊಂಡು ಸುಂದರ ರಥವನ್ನು ನಿರ್ಮಿಸಿದರು. ರಥಕ್ಕೆ ಬಣ್ಣ ಬಣ್ಣದ ರೇಷ್ಮೆ ಸೀರೆಗಳಿಂದ ಅಲಂಕರಿಸಿದರು. ವಿವಿಧ ವರ್ಣದ ಬಾವುಟಗಳಿಂದ ಶೃಂಗರಿಸಿದರು. ವಿವಿಧ ಪರಿಮಳ ಪುಷ್ಪಗಳಿಂದ ರಥವನ್ನು ಅಲಂಕರಿಸಲಾಯಿತು.ನಂತರ ಕಳಸಪೂಜೆ, ಮಾರುತಿ ಪೂಜೆ, ಬಲಿ ಪೂಜೆ, ಸಮರ್ಪಣೆ ಮಾಡಿ ಧೂಪಧಾರತಿ ಬೆಳಗಲಾಯಿತು. ಗ್ರಾಮದ ಸುತ್ತ ದೇವರ ಮೆರವಣಿಗೆ ಮಾಡಿ ರಥದ ಸುತ್ತ ಮಂಗಳವಾದ್ಯದೊಂದಿಗೆ ಪ್ರದಕ್ಷಿಣೆ ಹಾಕಿಸಲಾಯಿತು.
ಹೊಲ ಗದ್ದೆಗಳೆನ್ನದೆ ಹಳ್ಳ ಗುಂಡಿಗಳಲ್ಲಿ ರಥ ಸಾಗಿತು. ಭಕ್ತರು ಹೊಲ ಗದ್ದೆಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿದ್ದ ರಥವನ್ನು ಕಂಡು ಭಕ್ತರು ವೀರಭದ್ರೇಶ್ವರಸ್ವಾಮಿ ಉಘೇ ಉಘೇ ಎಂದು ಭಕ್ತಿ ಪರವಶರಾಗಿ ಉದ್ಘೋಷ ಕೂಗಿದರು.
ಗ್ರಾಮದಿಂದ ಗುಡಿಗೆ ಸಾಗಿದ ಮಹಾರಥಕ್ಕೆ ಭಕ್ತರು ಅಂತಿಮವಾಗಿ ಪೂಜಿಸಿದರು. ರಥೋತ್ಸವ ಮುಗಿದ ನಂತರ ರಥ ಬಂಡಿಯನ್ನು ಕಳಚಲಾಯಿತು. ಭಕ್ತರಿಗೆ ಮಹಾರಥದಲ್ಲಿ ಹೂವಿನ ಪ್ರಸಾದ ವಿತರಿಸಲಾಯಿತು. ಈ ವೇಳೆ ಭಕ್ತರಿಗೆ ಅನ್ನದಾಸೋಹ, ನೀರುಮಜ್ಜಿಗೆ ಪಾನಕವನ್ನು ಗ್ರಾಮಸ್ಥರು, ಭಕ್ತರು ವಿತರಿಸಿದರು.