)
-ಜಯನಗರದ ಶಾಲಿನಿ ಮೈದಾನದಲ್ಲಿ 22ರ ವರೆಗೆ ಆಯೋಜನೆ । ರಾಜ್ಯಪಾಲರಾದ ಸುಧಾ ಯಾದವ್‌ರಿಂದ 5 ಕೃತಿಗಳ ಬಿಡುಗಡೆ
ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ನ.20ರಿಂದ 22ರವರೆಗೆ ವೀರಲೋಕ ಬುಕ್ಸ್ ಆಯೋಜಿಸಿರುವ ‘ವೀರಲೋಕ ಪುಸ್ತಕ ಸಂತೆ’ಯ 6ನೇ ಆವೃತ್ತಿಯ ಕಾರ್ಯಕ್ರಮ ನಡೆಯಲಿದೆ.
ಮೂರು ದಿನವೂ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ನ.20ರಂದು ಬೆಳಗ್ಗೆ 10ಕ್ಕೆ ಸಂತೆ ಅಧಿಕೃತವಾಗಿ ಆರಂಭವಾಗಲಿದೆ. ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು ವೀರಲೋಕದ 5 ಹೊಸ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಜಯಂತ ಕಾಯ್ಕಿಣಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.ಹಿರಿಯ ಸಾಹಿತಿ ಎಸ್.ದಿವಾಕರ್ ಅವರಿಗೆ ‘ವೀರಲೋಕ ಪುಸ್ತಕ ಸಂತೆ ಗೌರವ’ ಸಮರ್ಪಿಸಲಾಗುವುದು. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಸದ ಜಿ.ಸಿ.ಚಂದ್ರಶೇಖರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡಪ್ರಭ ಪತ್ರಿಕೆ ಸಂಪಾದಕ ಜೋಗಿ, ಎನ್.ಬಿ.ಟಿ ಅಧಿಕಾರಿ ಡಾ.ಪತ್ತಿಪಾಕ ಮೋಹನ ಹಾಗೂ ಮಾಜಿ ಬಿಬಿಎಂಪಿ ಸದಸ್ಯ ಬಿ.ಸೋಮಶೇಖರ್ ಪಾಲ್ಗೊಳ್ಳಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ಮಕ್ಕಳ ಸಾಹಿತ್ಯ, ಮಹಿಳಾ ಬರಹ, ವಿಜ್ಞಾನ, ಹಾಸ್ಯ, ರಾಜಕೀಯ ಮತ್ತು ಸಾಹಿತ್ಯ ಮುಂತಾದ ವಿಷಯಗಳ ಕುರಿತು ಪ್ರತಿಭಾ ನಂದಕುಮಾರ್, ವೈಎಸ್ವಿ ದತ್ತ, ಟಿ.ಆರ್.ಅನಂತರಾಮು, ಡುಂಡಿರಾಜ್ ಸೇರಿದಂತೆ ಪ್ರಮುಖ ಸಾಹಿತಿ-ಚಿಂತಕರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ನ.22ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಶಾಸಕ ಎ.ಪಿ.ರಂಗನಾಥ್ ಹಾಗೂ ನಟ ಡಾ.ಶ್ರೀಧರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ಜೀವರತಿ’ ಕಾದಂಬರಿಯ ಲೇಖಕಿ ಜ.ನಾ.ತೇಜಶ್ರೀ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ, ವೀರಲೋಕ ದೀಪಾವಳಿ ಕಥಾ ಸ್ಪರ್ಧೆ 2026’ರ ಬಹುಮಾನ ವಿತರಣೆಯೂ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 70221 22121 ಅಥವಾ 88612 12172 ಸಂಪರ್ಕಿಸುವಂತೆ ಕೋರಲಾಗಿದೆ.