ಕೊಪ್ಪಳ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪಿಸಿ ಮತ್ತು ಪಿಎನ್ಡಿಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ನಡೆಯಿತು. ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ ತಿಳಿಸಿದರು.
ಕೊಪ್ಪಳ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಹಾಗೂ ಲಿಂಗ ಅಸಮಾನತೆ ತಡೆಗಟ್ಟುವ ಉದ್ದೇಶದಿಂದ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು. ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಪಿಸಿ ಮತ್ತು ಪಿಎನ್ಡಿಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲ ಮಗು ಹೆಣ್ಣಾದರೆ ಎರಡನೇ ಮಗು ಗಂಡಾಗಬೇಕೆಂಬ ಮನೋಭಾವ ಕೆಲವು ಕುಟುಂಬಗಳಲ್ಲಿದೆ. ಇಂತಹ ಮನೋಭಾವದಿಂದ ಭ್ರೂಣ ಲಿಂಗ ಪತ್ತೆಗೆ ಪ್ರಯತ್ನಿಸುವ ಸಾಧ್ಯತೆಗಳಿದ್ದು, ಇದಕ್ಕೆ ಅವಕಾಶ ನೀಡಬಾರದು. ಯಾವುದೇ ಸ್ಕ್ಯಾನಿಂಗ್ ಕೇಂದ್ರದಲ್ಲಿ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವ ಬಗ್ಗೆ ಅನುಮಾನವಿದ್ದರೆ ಸಮಿತಿ ಸದಸ್ಯರು ಗೌಪ್ಯ ಕಾರ್ಯಾಚರಣೆ ನಡೆಸಿ ಪರಿಶೀಲಿಸಬಹುದು. ಸಾರ್ವಜನಿಕರೂ ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಬಹುದು. ಜಿಲ್ಲೆಯಲ್ಲಿ ಈ ವರೆಗೆ ಇಂತಹ ಪ್ರಕರಣ ವರದಿಯಾಗಿಲ್ಲ. ಮುಂದೆಯೂ ಇಂತಹ ಕೃತ್ಯಗಳು ನಡೆಯದಂತೆ ಎಲ್ಲರೂ ಜಾಗ್ರತರಾಗಬೇಕು ಎಂದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್. ಮಾತನಾಡಿ, ಅಕ್ರಮ ಭ್ರೂಣ ಲಿಂಗ ಪತ್ತೆ ಕುರಿತು ಆರೋಗ್ಯ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು. ತನಿಖೆಯಲ್ಲಿ ಪ್ರಕರಣ ಸಾಬೀತಾದರೆ ಮಾಹಿತಿದಾರರ ಗೌಪ್ಯತೆ ಕಾಪಾಡುವುದರೊಂದಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು. ಈ ಹಿಂದೆ ₹50 ಸಾವಿರ ಇದ್ದ ಬಹುಮಾನ ಮೊತ್ತವನ್ನು ಸರ್ಕಾರ ₹1 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.
ನಿಯಮ ಉಲ್ಲಂಘಿಸಿದರೆ ಕೇಂದ್ರ ಬಂದ್: ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಪರವಾನಗಿ ಅವಧಿ ಮುಗಿಯುವ ಮೂರು ತಿಂಗಳ ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಫಾರಂ-ಎಫ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಯಮ ಉಲ್ಲಂಘಿಸುವ ಹಾಗೂ ನೋಂದಣಿ, ಪರವಾನಗಿ ನವೀಕರಿಸದ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು.ಭ್ರೂಣ ಲಿಂಗ ಪತ್ತೆಯಲ್ಲಿ ತೊಡಗುವ ವೈದ್ಯರಿಗೆ ಜೈಲು ಶಿಕ್ಷೆ, ದಂಡ ಹಾಗೂ ವೈದ್ಯಕೀಯ ಪರವಾನಗಿ ರದ್ದತಿಯಂತಹ ಕ್ರಮಗಳಿವೆ. ಮೊದಲ ಅಪರಾಧಕ್ಕೆ ಐದು ವರ್ಷಗಳ ವರೆಗೆ ವೈದ್ಯಕೀಯ ಪರವಾನಗಿ ಅಮಾನತು ಮಾಡಬಹುದು. ಪುನರಾವರ್ತಿತ ಅಪರಾಧಕ್ಕೆ ಶಾಶ್ವತವಾಗಿ ಪರವಾನಗಿ ರದ್ದುಗೊಳಿಸಲು ಅವಕಾಶವಿದೆ. ಭ್ರೂಣ ಲಿಂಗ ಪತ್ತೆಗೆ ವೈದ್ಯರ ಮೇಲೆ ಒತ್ತಡ ಹೇರುವ ಮಹಿಳೆ, ಪತಿ ಅಥವಾ ಸಂಬಂಧಿಕರಿಗೂ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ₹50 ಸಾವಿರದಿಂದ ₹1 ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದರು.
ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಕುರಿತು ಖಾಸಗಿ ವೈದ್ಯರು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳು ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಬಾಲ್ಯವಿವಾಹ ತಡೆಗೂ ಪೋಷಕರು ಆದ್ಯತೆ ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಮಕ್ಕಳ ತಜ್ಞ ಡಾ. ಗಿರೀಶ, ರೇಡಿಯಾಲಜಿಸ್ಟ್ ಡಾ. ದಯಾನಂದಸ್ವಾಮಿ, ಸ್ತ್ರೀರೋಗ ತಜ್ಞೆ ಡಾ. ಸ್ಮಿತಾ ಜೆ. ಐಲಿ, ವಕೀಲ ಶಂಕರ್ ಬಿಸರಳ್ಳಿ, ಎನ್ಜಿಒ ಪ್ರತಿನಿಧಿಗಳಾದ ಡಾ. ವಿಶ್ವನಾಥ ಬಸವರಾಜ ನಲ್ವಾಡ, ಶಂಕ್ರಪ್ಪ ಡಿ. ಸುರಳ್, ಸಲೀಮಾ ಜಾನ್ ಉಪಸ್ಥಿತರಿದ್ದರು.