ಕನ್ನಡಪ್ರಭ ವಾರ್ತೆ ಕುಶಾಲನಗರ ಹನುಮ ಜಯಂತಿ ದಶಮಂಟಪ ಸಮಿತಿ ಆಶ್ರಯದಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಮಂಟಪಗಳ ಪೈಕಿ ಗುಡ್ಡೆಹೊಸೂರು ಅರುಣ್ ಕುಮಾರ್ ನೇತೃತ್ವದ ವೀರಾಂಜನೇಯ ಸೇವಾ ಸಮಿತಿ ಪ್ರಥಮ ಬಹುಮಾನ ಪಡೆದಿದೆ.ದ್ವಿತೀಯ ಬಹುಮಾನವನ್ನು ಹಾರಂಗಿಯ ಭಾಸ್ಕರ ನಾಯಕ್ ನೇತೃತ್ವದ ವೀರ ಹನುಮ ಸೇವಾ ಸಮಿತಿ ಮಂಟಪ ಪಡೆಯಿತು.ಕುಶಾಲನಗರ ಎಚ್ ಆರ್ ಪಿ ಕಾಲೋನಿಯ ಡಿ ಸಿ ಮಂಜುನಾಥ್ ನೇತೃತ್ವದ ಅಂಜನಿಪುತ್ರ ಜಯಂತೋತ್ಸವ ಆಚರಣಾ ಟ್ರಸ್ಟ್ ತೃತೀಯ ಬಹುಮಾನವನ್ನು ಪಡೆದಿದೆ. ಈ ಸಂದರ್ಭ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವಾಗಿ ರು. 50,000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರು. 40,000 ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ವಿಜೇತರಿಗೆ ರು. 30,000 ಮತ್ತು ಟ್ರೋಫಿ ವಿತರಿಸಲಾಯಿತು.ಉಳಿದಂತೆ ಪಾಲ್ಗೊಂಡ ಮಂಟಪಗಳಿಗೆ ತಲಾ 10, 000 ರು. ನಗದು ಮತ್ತು ಟ್ರೋಫಿ ನೀಡಲಾಯಿತು.ಕೂಡಿಗೆಯ ಮಂಟಪ ಆಕಸ್ಮಿಕ ಬೆಂಕಿಗೆ ಬಲಿ: ಸಂಜೆ ಆರಂಭಗೊಂಡ ಶೋಭಾ ಯಾತ್ರೆ ಮುಂಜಾನೆ 4 ರ ತನಕ ನಡೆಯಿತು. ಸುಮಾರು ನಾಲ್ಕು ಗಂಟೆಗೆ ಕೂಡಿಗೆ ಕೂಡು ಮಂಗಳೂರು ಭಾಗದಿಂದ ಬಂದು ಪ್ರದರ್ಶನ ನೀಡಿದ ಹನುಮಸೇನಾ ಸಮಿತಿಯ ಮಂಟಪ ಪಟ್ಟಣದ ರಥ ಬೀದಿ ಬಳಿ ಬೆಂಕಿಗೆ ಆಹುತಿ ಆದ ಘಟನೆ ನಡೆಯಿತು. ಪ್ರದರ್ಶನ ನೀಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಂಟಪದಲ್ಲಿ ಏಕಾಏಕಿ ಬೆಂಕಿ ಕಂಡುಬಂದು ಬಹುತೇಕ ಸ್ತಬ್ಧ ಚಿತ್ರಗಳು ಬೆಂಕಿಗೆ ಆಹುತಿಯಾಗಿವೆ.ರಕ್ಷಣಾ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ರೀತಿಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.