ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಪೋರ್ಚುಗೀಸರ ಅಮಾನವೀಯತೆ, ಕ್ರೂರತೆಗೆ ಏಳು ಬಾರಿ ಸಡ್ಡು ಹೊಡೆದು ತುಳುನಾಡಿನ ನೆಲ ಮತ್ತು ಜನತೆಯ ಹಿತರಕ್ಷಣೆಗೆ ಜೀವನವನ್ನೇ ಮುಡಿಪಾಗಿಟ್ಟ ಅಭಯರಾಣಿ ಅಬ್ಬಕ್ಕಳ ಸಾಹಸ, ಸಾಧನೆ ಅನುಕರಿಸಲಾಗದ ಮಾದರಿ. ತನ್ನ ಪತಿಯೇ ವೈರಿಯೆನ್ನುವ ಅರಿವಿದ್ದರೂ ಸತಿಯ ಧರ್ಮ ತಪ್ಪದೆ ಧೈರ್ಯದಿಂದ ಹೋರಾಡಿದ ವೀರ ರಾಣಿ ಅಬ್ಬಕ್ಕ. ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಜನತೆ ಅಬ್ಬಕ್ಕಳ ಸಂಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆಯೊಂದನ್ನು ತೆರೆಯುವ ಸಂಕಲ್ಪಕ್ಕೆ ಮುಂದಾಗಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.
ಎಕ್ಸಲೆಂಟ್ ಸಂಸ್ಥೆಯ ಮಾಸಿಕ ಪತ್ರಿಕೆ ಮನೋರಮಾದ ರಾಣಿ ಅಬ್ಬಕ್ಕ ದೇವಿಯ ಕುರಿತಾದ ವಿಶೇಷ ಸಂಚಿಕೆಯನ್ನೂ ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.
ಅಜಾದಿ ಕಾ ಅಮೃತ ಮಹೋತ್ಸವದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿ ನಡೆದ ಹೋರಾಟ, ಹೋರಾಡಿದ ಯಾವ ಸಾಧಕರನ್ನೂ ಮರೆತಿಲ್ಲ. ವ್ಯವಸ್ಥಿತವಾಗಿ ಎಲ್ಲರನ್ನೂ, ಎಲ್ಲವನ್ನೂ ದಾಖಲಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಹದಿನಾಲ್ಕೂವರೆ ಸಾವಿರದಷ್ಟು ಇಂತಹ ಯಶೋಗಾಥೆಗಳು ಡಿಜಿಟಲ್ ಕೋಶದಲ್ಲಿ ದಾಖಲಾಗಿದ್ದು ಅವುಗಳನ್ನು ಜನತೆಗೆ ಪರಿಚಯಿಸುವ ಕೆಲಸ ಜಿಲ್ಲಾಧಿಕಾರಿಗಳ ಮೂಲಕ ನಡೆಯಬೇಕಾಗಿದೆ. 2003ರಲ್ಲೇ ಅಬ್ಬಕ್ಕನ ವಿಶೇಷ ಅಂಚೆ ಲಕೋಟೆ, ನಂತರದ ದಿನಗಳಲ್ಲಿ ದೂರದರ್ಶನಲ್ಲಿ ಅಬ್ಬಕ್ಕಳ ಸಾಕ್ಷ್ಯಚಿತ್ರ , ಅಮರಚಿತ್ರ ಕಥೆ ಸರಣಿಯಲ್ಲೂ ಅಬ್ಬಕ್ಕನನ್ನು ದಾಖಲಿಸುವ ಕೆಲಸದ ಮೂಲಕ ಕೇಂದ್ರ ಸರಕಾರವೂ ಅಬ್ಬಕ್ಕನ್ನು ಮರೆತಿಲ್ಲ ಎಂದು ನಿರ್ಮಲಾ ವಿವರಿಸಿದರು.ನಾರೀಶಕ್ತಿಯ ಸ್ಫೂರ್ತಿ: ರಾಷ್ಟ್ರೀಯ ಏಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಪ್ರಧಾನಿ ಅವರ ಆಶಯದಂತೆ ಇಂದು ಭಾರತೀಯ ಮಹಿಳೆ ರಫೇಲ್, ತೇಜಸ್, ಸೇನೆ, ಯುದ್ಧ ನೌಕೆಯಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಹಿಳಾ ಮಸೂದೆ ಆಕೆಗೆ ಇನ್ನಷ್ಟು ಶಕ್ತಿ ತುಂಬಲಿದೆ. ಧರ್ಮದ ಪಾಲನೆಯ ಜತೆ ರಕ್ಷಣೆಗೂ ಮಹಿಳೆ ಅಬ್ಬಕ್ಕನೇ ಮೊದಲಾದ ಮಹಿಳಾ ಸಾಧಕಿಯರಿಂದ ಸ್ಫೂರ್ತಿ ಪಡೆಯುವಂತಾಗಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಅಬ್ಬಕ್ಕನಿಗೆ ಪೂರಕವಾಗಿ ಹೊನ್ನಾವರದಲ್ಲಿ ರಾಣಿ ಚೆನ್ನಬೈರಾದೇವಿ ನಡೆಸಿದ ಹೋರಾಟದ ನೆನಪನ್ನು ಶಾಶ್ವತವಾಗಿಡಲು ಅರಣ್ಯ ಇಲಾಖೆ ಅಲ್ಲಿ ಎರಡು ಎಕರೆ ಸ್ಥಳ ನೀಡಿದರೆ ಸ್ಮಾರಕ ನಿರ್ಮಿಸುವುದಾಗಿ ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಫಿಲಾಟಲಿ ನಿರ್ದೇಶಕ ಮಹೇಂದ್ರ ಸಿಂಘಿ ಉಪಸ್ಥಿತರಿದ್ದರು.