ತುಮಕೂರು ವಿ.ವಿ.ಯಲ್ಲಿ ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ । ಸ್ವಾತಂತ್ರ್ಯ ನಂತರದ ಭಾರತವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ: ಕುಸಚಿವೆ ಅಭಿಮತ
ಕನ್ನಡಪ್ರಭ ವಾರ್ತೆ ತುಮಕೂರುಪ್ರತಿಭೆ ಮತ್ತು ಕೌಶಲ್ಯ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ. ಅದನ್ನು ನಮಗೆ ಪ್ರೇರಣೆಯಾಗಿ ತೋರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಅವರ ಸಂವಿಧಾನದ ಕಾರಣಕ್ಕಾಗಿಯೇ ಸ್ವಾತಂತ್ರ್ಯ ನಂತರದ ಭಾರತವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗಾಗಿ ಅಂಬೇಡ್ಕರ್ ಅವರ ನೈಜ ಆಶಯ, ಕಾನೂನುಗಳನ್ನು ಅನುಷ್ಠಾನ ಮಾಡಲು ಇಂದಿನ ಯುವಜನರು ಇದನ್ನು ನೈತಿಕ ಮಾರ್ಗ ಎಂದು ತಿಳಿದು ಸಂವಿಧಾನದ ರಕ್ಷಣೆಗೆ ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.
ಇಂದಿನ ಯುವಕರಿಗೆ ಅವಕಾಶಗಳು ಹೆಚ್ಚಾಗಿದ್ದು, ಅವುಗಳನ್ನು ಬಳಸಿಕೊಳ್ಳುವಲ್ಲಿ ಸದಾ ಜಾಗ್ರತೆಯಿಂದ ಕ್ರಿಯಾಶೀಲರಾಗಬೇಕಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಅರ್ಥವಾಗಬೇಕಾದರೆ ರೆಡ್ ಕಾರ್ ಥಿಯರಿಯಂತಹ ಉನ್ನತ ಮಟ್ಟದ ಜ್ಞಾನದ ಅವಶ್ಯಕತೆ ಇರುತ್ತದೆ ಎಂದರು.ಗುಬ್ಬಿ ತಾಲೂಕಿನ ದಂಡಾಧಿಕಾರಿ ಆರತಿ ಬಿ. ಮಾತನಾಡಿ, ಅಂಬೇಡ್ಕರ್ ಅವರ ಶ್ರಮದ ಫಲವಾಗಿ ಈ ದೇಶದ ಶೋಷಿತರಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಸ್ತಕ ಮತ್ತು ಜ್ಞಾನ ದಾಹದ ಕಾತುರತೆ ಇಂದಿನ ಯುವಕರಿಗೆ ಆದರ್ಶವಾಗಬೇಕಿದೆ. ಅವರ ಕೊಡುಗೆಗಳು ಕೇವಲ ಸಂವಿಧಾನಕ್ಕೆ ಸೀಮಿತವಾಗಿರದೇ ಆರ್ಥಿಕ ತತ್ವಜ್ಞಾನ, ಭಾಷಾಜ್ಞಾನ, ರಾಜಕೀಯ ಇನ್ನೂ ಹಲವಾರು ಕ್ಷೇತ್ರಗಳಿಗೆ ವಿಪುಲವಾದ ಚಿಂತನೆಗಳನ್ನು ನೀಡಿ ನವ ಭಾರತವನ್ನು ನಿರ್ಮಾಣ ಮಾಡಲು ಭದ್ರಬುನಾದಿ ಹಾಕಿದ್ದಾರೆ. ಅನಗತ್ಯವಾಗಿ ಸಂವಿಧಾನವನ್ನು ವಿಮರ್ಶಿಸದೇ ಜಗತ್ತಿನಲ್ಲಿಯೇ ಶ್ರೇಷ್ಠವಾದ ಮಾನ್ಯತೆ ಪಡೆದ ಸಂವಿಧಾನದ ನೈಜ ಆಶಯಗಳನ್ನು ಅನುಷ್ಠಾನ ಮಾಡಲು ಭಾರತೀಯರೆಲ್ಲರೂ ಶ್ರಮಿಸಬೇಕು ಎಂದರು.
ಕಲಾಶ್ರೀ ಡಾ. ಲಕ್ಷ್ಮಣ್ ದಾಸ್, ತುಮಕೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ, ರಾಜ್ಯಶಾಸ್ತ್ರದ ಮುಖ್ಯಸ್ಥ ಡಾ. ಮನೋಹರ್ ಬಾಬು, ಪ್ರಾಂಶುಪಾಲ ಡಾ. ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಕವಿಗಳು ಹಾಗೂ ಪ್ರಾಧ್ಯಾಪಕ ಡಾ.ಓ. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಸುರೇಶ್ ಕುಮಾರ್ ಡಿ.ವಿ., ತುಮಕೂರು ವಿಶ್ವ ವಿದ್ಯಾನಿಲಯದ ಸಂಶೋಧನಾ ಸಹಾಯಕ ಡಾ. ಲಕ್ಷ್ಮೀರಂಗಯ್ಯ ಕೆ.ಎನ್. ಉಪಸ್ಥಿತರಿದ್ದರು.ಫೋಟೊ:
ತುಮಕೂರು ವಿ.ವಿ.ಯಲ್ಲಿ ಆಯೋಜಿಸಿದ್ದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ವಿ.ವಿ. ಕುಲಸಚಿವೆ ನಾಹಿದಾ ಜಮ್ ಜಮ್ ಉದ್ಘಾಟಿಸಿದರು. ಜತೆಗೆ ಮತ್ತಿತರ ಗಣ್ಯರು ಇದ್ದರು.