ಕೆಲವೇ ಕೆಲವರ ಕೈಗೆ ವೀವಿ ಸಂಘದ ಅಧಿಕಾರ; ಸದಸ್ಯತ್ವ ನೀಡಲು ಹಿಂದೇಟು- ಆರೋಪ

KannadaprabhaNewsNetwork |  
Published : Feb 20, 2026, 02:15 AM IST
ವೀವಿ ಸಂಘದ ಸದಸ್ಯತ್ವ ನೀಡುವಂತೆ ವೀವಿ ಸಂಘ ಸದಸ್ಯತ್ವ ಅಭಿಯಾನ ಸಮಿತಿ ಸದಸ್ಯರು ಬಳ್ಳಾರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.  | Kannada Prabha

ಸಾರಾಂಶ

ಕಳೆದ 20 ವರ್ಷಗಳಿಂದ ಸದಸ್ಯತ್ವ ತೆಗೆದುಕೊಂಡಿಲ್ಲ. ಆಜೀವ ಸದಸ್ಯರ ಪೈಕಿ 450ರಿಂದ 500 ಜನರು ಈಗಾಗಲೇ ಮರಣ ಹೊಂದಿದ್ದಾರೆ.

ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಅಧಿಕಾರ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿರುವಂತೆ ನೋಡಿಕೊಳ್ಳುವ ಹುನ್ನಾರದಿಂದ ಕಳೆದ ಎರಡು ದಶಕಗಿಂದ ಸದಸ್ಯತ್ವ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘ ಸದಸ್ಯತ್ವ ಅಭಿಯಾನ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನ ಸಮಿತಿಯ ಮುಖಂಡ ಮಧುರಚನ್ನಶಾಸ್ತ್ರಿ, ವೀವಿ ಸಂಘದ ಆಡಳಿತ ಮಂಡಳಿ ನಿಲುವು ಖಂಡಿಸಿದರಲ್ಲದೆ, ಸದಸ್ಯತ್ವ ನೀಡಿಕೆ ಸಂಬಂಧ ಒಂದು ತಿಂಗಳೊಳಗೆ ಪೂರಕ ನಿರ್ಧಾರ ಕೈಗೊಳ್ಳದೇ ಹೋದರೆ ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಸಿದರು.ಕಳೆದ 20 ವರ್ಷಗಳಿಂದ ಸದಸ್ಯತ್ವ ತೆಗೆದುಕೊಂಡಿಲ್ಲ. ಆಜೀವ ಸದಸ್ಯರ ಪೈಕಿ 450ರಿಂದ 500 ಜನರು ಈಗಾಗಲೇ ಮರಣ ಹೊಂದಿದ್ದಾರೆ. ವೀವಿ ಸಂಘಕ್ಕೆ ಸದಸ್ಯತ್ವ ನೀಡುವಂತೆ ಈ ಹಿಂದಿನಿಂದಲೂ ಕೇಳುತ್ತಾ ಬರಲಾಗಿದೆ. ಆದರೆ, ಮೂರು ವರ್ಷಕ್ಕೊಮ್ಮೆ ಜರುಗುವ ಚುನಾವಣೆ ಪ್ರಚಾರಕ್ಕೆ ಬರುವ ವೀವಿ ಸಂಘದ ಮುಖಂಡರು ಚುನಾವಣೆ ಬಳಿಕ ಸದಸ್ಯತ್ವ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಈವರೆಗೆ ಭರವಸೆ ನೀಡುತ್ತಲೇ ಬಂದಿದ್ದಾರೆಯೇ ಹೊರತು, ಈ ಬಗ್ಗೆ ಯಾವುದೇ ಸಮುದಾಯದ ಪರವಾದ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.

ಎಲ್ಲ ಸಮುದಾಯಗಳಿಗೆ ಶಿಕ್ಷಣ ನೀಡಬೇಕು. ಸಮಾಜವನ್ನು ಸ್ವಾಸ್ಥ್ಯ ಕಾಪಾಡಬೇಕು ಎಂಬ ಉದ್ದೇಶದಿಂದ ವೀವಿ ಸಂಘವನ್ನು ಸ್ಥಾಪಿಸಲಾಯಿತು. ಸಂಘ ಅಸ್ವಿತ್ವ ಪಡೆದು 100 ವರ್ಷ ದಾಟಿವೆ. ಸಮಾಜದ ಎಲ್ಲರಿಗೂ ಸಂಘದ ಸದಸ್ಯತ್ವ ದೊರೆಯಬೇಕು ಎಂಬುದು ಹಾನಗಲ್ಲು, ಉಜ್ಜಯನಿ ಶ್ರೀಗಳ ಆಶಯವಾಗಿತ್ತು. ಆದರೆ, ಕಳೆದ ಎರಡೂವರೆ ದಶಕಗಳಿಂದೀಚೆ ಚುನಾವಣೆಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದವರು ತಮ್ಮದೇ ಹಿತಾಸಕ್ತಿ ಕಾಪಾಡಿಕೊಳ್ಳಲು ಸದಸ್ಯತ್ವ ವಿಸ್ತರಿಸಲಿಲ್ಲ. ಕಳೆದ 20 ವರ್ಷಗಳಿಂದ ಸದಸ್ಯತ್ವ ನೀಡಿಕೆಯನ್ನೇ ಸ್ಥಗಿತಗೊಳಿಸಲಾಗಿದೆ. ಅಲ್ಲಂ ಗುರುಬಸವರಾಜ್, ಉಡೇದ ಬಸವರಾಜ ಸೇರಿದಂತೆ ಅನೇಕ ಮುಖಂಡರಿಗೆ ಸದಸ್ಯತ್ವ ನೀಡುವಂತೆ ಮನವಿ ಮಾಡಿಕೊಂಡು ಬಂದೆವು. ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಆದ್ಯತೆಯಾಗಿ ಸದಸ್ಯತ್ವ ನೀಡುವುದಾಗಿ ಹೇಳಿದರು. ಗೆದ್ದ ಬಳಿಕ ನೀಡಿದ ಭರವಸೆ ಈಡೇರಿಸಲಿಲ್ಲ ಎಂದು ವಿವರಿಸಿದರು.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವೀರಶೈವ ಸಮುದಾಯವಿದೆ. ಆದರೆ, ಸಂಘದಲ್ಲಿ ಇದೀಗ ಸುಮಾರು 2 ಸಾವಿರ ಜನರಷ್ಟೇ ಆಜೀವ ಸದಸ್ಯರಿದ್ದಾರೆ. ಅಖಂಡ ಜಿಲ್ಲೆಯಲ್ಲಿ ಸೇವಾ ಮನೋಭಾವನೆ ಇರುವ ವೀರಶೈವ ಸಮಾಜದ ಸಾಕಷ್ಟು ಜನ ಗಣ್ಯರಿದ್ದಾರೆ. ನಿಸ್ವಾರ್ಥದಿಂದ ಸೇವೆ ಮಾಡುವವರಿದ್ದಾರೆ. ಸಂಘದಡಿ ಕಾರ್ಯ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಖಾಸಗಿ ಶಾಲಾ-ಕಾಲೇಜುಗಳಿಗೆ ಪೈಪೋಟಿವೊಡ್ಡುವಷ್ಟು ಶಕ್ತವಾಗಿಲ್ಲ. ಇದಕ್ಕೆ ಸಂಘದಿಂದ ಚುನಾಯಿತಗೊಂಡವರೇ ಕಾರಣರು. ಸಂಘವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೊಳಿಸುವ ಆಶಯಗಳಿಲ್ಲ ಎಂದು ಆಪಾದಿಸಿದರು.

ಸದಸ್ಯತ್ವ ನೀಡುವಂತೆ ವೀವಿ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಒಂದು ತಿಂಗಳೊಳಗೆ ಸದಸ್ಯತ್ವ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದರೆ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

ಸಮಿತಿಯ ಪ್ರಮುಖರಾದ ಎಸ್.ಎಂ.ಕಾಶಿನಾಥಯ್ಯ, ವೀರೇಶಗೌಡ ಕೊಟ್ಟೂರು, ಓಂಕಾರೇಶ್ವರ, ಸಿ.ಎಂ.ರವಿಕಾಂತ, ಎಸ್.ರಾಜಶೇಖರ ಸೂಳೆಬಾವಿ, ವಿಜಯಕುಮಾರ್ ಶೀಲವಂತಮಠ, ಕಿರಣ್ ಶಂಕ್ರಿ, ಎ.ಎಂ.ಮಲ್ಲಿಕಾರ್ಜುನಯ್ಯ, ಐ.ಎಂ.ಶ್ರವಣ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಭೂಮಿ ಹಕ್ಕು ಮಹಜರ್ ನಿಯಮ ಉಲ್ಲಂಘನೆ: ರವೀಂದ್ರ ನಾಯ್ಕ
ಪರಿಣಾಮ ಬೀರದ ಸಾರಿಗೆ ಸಂಸ್ಥೆ ನೌಕರರ ಹೋರಾಟ