ಕನ್ನಡಪ್ರಭ ವಾರ್ತೆ ತುಮಕೂರುವೀರಸನ್ಯಾಸಿಯ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು, ಆದರ್ಶಗಳು ಸಮಾಜ ಸುಧಾರಣೆಗೆ ದಾರಿದೀಪವಾಗಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಹೇಳಿದರು.
ಏಳಿ ಎದ್ದೇಳಿ ಗುರಿ ತಲುಪುವವರೆಗೆ ನಿಲ್ಲಬೇಡಿ ಎಂದು ಜಾಗೃತಿ ಮೂಡಿಸಿದ ವಿವೇಕಾನಂದರು, ಪ್ರತಿ ವ್ಯಕ್ತಿಯೊಳಗಿನ ದೈವತ್ವದ ಮೇಲೆ ನಂಬಿಕೆ, ಆತ್ಮವಿಶ್ವಾಸ, ಇಂದ್ರಿಯ ನಿಗ್ರಹ, ನಿರಂತರ ಕಲಿಕೆ, ದೇಶಭಕ್ತಿ, ಬಡವರ ಸೇವೆಯನ್ನು ಬೋಧಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಕರೆ ನೀಡಿದರು ಎಂದು ಹೇಳಿದರು. ಭಾರತೀಯರ ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಿ ರಾಷ್ಟೀಯ ಹೆಮ್ಮೆ ತುಂಬಿಸಿದರು. ಭಾರತದ ಜನರನ್ನು ಮತ್ತು ಅದರ ಸಂಸ್ಕೃತಿಯನ್ನು ಪೂಜಿಸುವುದೇ ದೊಡ್ಡ ಧರ್ಮ ಎಂದು ಹೇಳಿದರು. ಧರ್ಮವೆಂದರೆ ಕೇವಲ ಆಚರಣೆಯಲ್ಲ, ಅದು ವೈಚಾರಿಕತೆ ಮತ್ತು ಮಾನವೀಯತೆ. ಧರ್ಮದ ಸಾರವನ್ನು ಅರಿಯಲು ಕುರುಡಾಗಿ ನಂಬದೆ ಪ್ರಶ್ನಿಸಬೇಕು ಎಂದು ವಿವೇಕಾನಂದರು ಹೇಳಿದ್ದಾರೆ ಎಂದು ಹೇಳಿದರು.ನಗರ ಬಿಜೆಪಿ ಅಧ್ಯಕ್ಷ ಟಿ.ಕೆ.ಧನುಷ್ ಮಾತನಾಡಿ, ನಾನು ಭಾರತೀಯ ಪ್ರತಿಯೊಬ್ಬ ಭಾರತೀಯನು ನನ್ನ ಸಹೋದರ ಎಂದು ಸೋದರತ್ವ, ಸಮಾನತೆಯ ಸಂದೇಶ ಸಾರಿದ ವಿವೇಕಾನಂದರು ಭಾರತದ ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ತಮ್ಮ ಬುದ್ಧಿವಂತಿಕೆ ಮತ್ತು ಬೋಧನೆಗಳಿಂದ ಇವತ್ತಿನ ಪೀಳಿಗೆಯವರೆಗೂ ಯುವಜನರನ್ನು ಪ್ರೇರೇಪಿಸುತ್ತಿದ್ದಾರೆ. ಮಕ್ಕಳಲ್ಲಿ ಮೌಲ್ಯ ಬಿತ್ತಲು ಸ್ವಾಮಿ ವಿವೇಕಾನಂದರ ತತ್ವಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್ ಮಾತನಾಡಿ, ವಿವೇಕಾನಂದರೂ ಕೇವಲ ಭಾರತಕ್ಕೆ ಸೀಮಿತವಾಗದೆ ವಿಶ್ವದಗಲಕ್ಕೂ ಸನಾತನ ಧರ್ಮವನ್ನು ಪ್ರಚುರ ಪಡಿಸಿ ಹುಬ್ಬೇರಿಸುವಂತೆ ಮಾಡಿದರು. ನಂತರ ನಡೆದ ವಿದ್ಯಾಮಾನಗಳು ಇದಕ್ಕೆ ಸಾಕ್ಷಿಯಾಗಿವೆ. ಓರ್ವ ಮಹಿಳೆ ನಾನು ನಿಮ್ಮ ಮಕ್ಕಳಿಗೆ ತಾಯಿಯಾಗಬೇಕು ಅಂದಾಗ, ಆಯ್ತು ನಾನೇ ನಿನಗೆ ಮಗನಾಗುವೆ ಎನ್ನುವ ಮೂಲಕ ಈ ಧರ್ಮದ ತಳಹದಿಯೇ ಸ್ತ್ರೀಗೌರವಕ್ಕೆ ಮೀಸಲಾಗಿದೆ ಎಂದು ಸಾರಿ ಹೇಳಿದರು. ಅಂತಹ ವೀರ ಸನ್ಯಾಸಿಯ ಜಯಂತಿಯಲ್ಲಿ ಕೇವಲ ನಾವು ಭಾಷಣಕ್ಕೆ ಸೀಮಿತವಾಗದೆ ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ನಮ್ಮ ಸಹೋದರ ಸಹೋದರಿಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವಿರೂಪಾಕ್ಷಪ್ಪ, ಮುಖಂಡರಾದ ಗಣೇಶ್‌ಪ್ರಸಾದ್, ಹನುಮಂತರಾಜು, ವಸಂತ ಸುದರ್ಶನ್, ರೇಖಾ ಶಿವಕುಮಾರ್, ಅಕ್ಷಯ್ ಚೌಧರಿ, ಪ್ರೀತಂ ಜೈನ್, ಗಂಗೇಶ್, ಸಿದ್ಧೇಶ್‌ಪ್ರಸಾದ್, ದೇವಿಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.