ಮುಂಡರಗಿ: ಸಮಾಜದಲ್ಲಿ ತತ್ವಬದ್ಧವಾಗಿ ನಿಜ ಹೇಳುವುದು ಬಹಳ ಜನರಿಗೆ ಬೇಕಾಗಿಲ್ಲ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.ಅನ್ನದಾನೀಶ್ವರ ಮಹಾಶಿವಯೋಗಿಗಳ 156ನೇ ಯಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಜರುಗಿದ ಧರ್ಮಚಿಂತನ ಗೋಷ್ಠಿ ಹಾಗೂ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರಮಾಣಬದ್ಧವಾಗಿ ಶರಣರ ವಚನಗಳನ್ನು ಹೇಳುವ ಮತ್ತು ಬರೆಯುವಂಥ ಬರಹವನ್ನು ಎಲ್ಲರೂ ಗಮನಿಸಬೇಕು. ಮುಂಡರಗಿ ಶ್ರೀಮಠದಿಂದ ಆ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ವೀರಶೈವ ಧರ್ಮ ಪುರಾತನ ಮತ್ತು ಪ್ರಾಚೀನ ಧರ್ಮ. ತತ್ವನಿಷ್ಠವಾದ ಮತ್ತು ತಾತ್ವಿಕ ಹಿನ್ನೆಲೆ ಇದೆ ಎಂದರು.ಶ್ರೀಮಠದಿಂದ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚೆನ್ನವೀರ ಸ್ವಾಮಿಗಳಿಗೆ ಹಾಗೂ ಶ್ರೀಮಠದ ಎಲ್ಲ ಸಾಹಿತ್ಯ ಕೃತಿಗಳನ್ನು ನಿರಂತರವಾಗಿ ಮುದ್ರಿಸಿಕೊಡುವ ಗದುಗಿನ ತ್ವರಿತ ಮುದ್ರಣಾಲಯದ ಅಶೋಕ ಕಟವಟೆಯವರಿಗೆ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರವನ್ನು ನೀಡಿ ಗೌರವಿಸುತ್ತಿರುವುದು ತತ್ವಬದ್ಧ ಹಾಗೂ ಕಾಯಕ ಜೀವಿಗಳನ್ನು ಗೌರವಿಸಿದಂತಾಗಿದೆ ಎಂದರು.ಪ್ರತಿಷ್ಠಾನ ಪುರಸ್ಕಾರ ಸ್ವೀಕರಿಸಿ ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ಮಾತನಾಡಿ ಮುಂಡರಗಿ ಅನ್ನದಾನೀಶ್ವರ ಶಿವಯೋಗಿ ತಾತ್ವಿಕ ಚಿಂತನೆಗಳನ್ನು ತುಂಬಿಕೊಂಡು ಚನ್ನಬಸವಣ್ಣನವರು ಬಿಟ್ಟು ಹೋದ ತತ್ವದ ಅಡಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ಪುರಸ್ಕಾರವು ಇನ್ನಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದರು.