ಕುಷ್ಟಗಿ: ಪಟ್ಟಣದ ಆರಾಧ್ಯ ದೈವ ಶ್ರೀಬುತ್ತಿ ಬಸವೇಶ್ವರ ಜಾತ್ರಾಮಹೋತ್ಸವದ ಮಹಾರಥೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ಜರುಗಿತು.
ಸಂಜೆ ಕೊರಡಕೇರಾ ಗ್ರಾಮದ ಹಾಲುಮತ ಸಮುದಾಯದ ಗುರುವಿನ ಮನೆತನದ ಸ್ವಾಮಿಗಳು ಹಾಗೂ ಹಾಲುಮತ ಸಮಾಜದ ಭಕ್ತರಿಂದ ತೇರಿನ ಹಗ್ಗವನ್ನು ಕೊರಡಕೇರಾ ಗ್ರಾಮದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನ ಆವರಣದಲ್ಲಿನ ರಥದವರೆಗೆ ತರಲಾಯಿತು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರಥವನ್ನು ಪಾದಗಟ್ಟೆಯವರೆಗೂ ಹರ್ಷೋದ್ಘಾರದೊಂದಿಗೆ ಎಳೆದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಸಾಗಿದ ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸೇವೆ ಸಲ್ಲಿಸಿ ಧನ್ಯತಾಭಾವ ಮೆರೆದರು. ಮಹಾರಥವು ಪಾದಗಟ್ಟೆ ತಲುಪಿ ಪುನಃ ರಥದ ಮನೆಗೆ ಆಗಮಿಸುತ್ತಿದ್ದಂತೆ ಚಿತ್ತಾಕರ್ಷಕ ಬಾಣ ಬಿರುಸುಗಳ ಪ್ರದರ್ಶನವೂ ಗಮನಾರ್ಹವೆನಿಸಿತು. ಜಾತ್ರೆಯಲ್ಲಿ ಈ ಬಾರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಈ ರಥೋತ್ಸವ ಚಾಲನೆಯ ಸಂದರ್ಭದಲ್ಲಿ ಅನ್ನದಾನೇಶ್ವರ ಮುಪ್ಪಿನ ಬಸವಲಿಂಗ ಶ್ರೀಗಳು, ಶಿವಾನಂದಯ್ಯ ಗುರುವಿನ, ತೇಜಯ್ಯ ಗುರುವಿನ, ದೊಡ್ಡಬಸವ ಪಾಟೀಲ ಬಯ್ಯಾಪುರ ಸೇರಿದಂತೆ ಪಟ್ಟಣದ ಗಣ್ಯರು ಹಾಗೂ ಸಾವಿರಾರು ಜನ ಭಕ್ತರು ಇದ್ದರು.
ವಿಶೇಷವಾಗಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸದಾಗಿ ಮದುವೆಯಾದ ನವ ಜೋಡಿಗಳು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ರಥೋತ್ಸವಕ್ಕೆ ಸಾಕ್ಷಿಯಾದರು.
ದೇವರ ದರ್ಶನ ಪಡೆದ ಶಾಸಕ ಪಾಟೀಲ: ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಬುತ್ತಿ ಬಸವೇಶ್ವರ ದೇವಸ್ಥಾನಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡರಾದ ಕಲ್ಲೇಶ್ ತಾಳದ, ಶಶಿಧರ ಕವಲಿ ಹಾಗೂ ಪ್ರಮುಖರು ಇದ್ದರು.