ವೀರಶೈವ, ಲಿಂಗಾಯತ ಎರಡೂ ಒಂದೇ: ಡಾ. ಶಂಕರ ಬಿದರಿ

KannadaprabhaNewsNetwork |  
Published : Jan 02, 2026, 03:30 AM IST
 | Kannada Prabha

ಸಾರಾಂಶ

ಮಹಾಸಭಾ ಯಾರನ್ನೂ ಟೀಕಿಸುವುದಲ್ಲಿ, ಯಾರ ವಿರುದ್ಧವೂ ಅಲ್ಲ. ವೀರಶೈವ ಲಿಂಗಾಯತರ ಅವರವರ ವೃತ್ತಿ, ಆಚರಣೆ ಏನೆ ಇದ್ದರೂ ಅದು ಅವರ ವೈಯಕ್ತಿಕ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷ ಡಾ. ಶಂಕರ ಬಿದರಿ ತಿಳಿಸಿದರು.

ಗದಗ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜದವರು, ರಾಜಕಾರಣಿಗಳು, ಮಠಾಧೀಶರು ಇನ್ನಷ್ಟು ಒಗ್ಗಟ್ಟನ್ನು ಮೂಡಿಸಿ ಬಲಪಡಿಸುವ ಕಾರ್ಯ ಮಾಡಬೇಕೆಂದು ರಾಜ್ಯದ ನಿವೃತ್ತ ಡಿಜಿ- ಐಜಿಪಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಅಧ್ಯಕ್ಷ ಡಾ. ಶಂಕರ ಬಿದರಿ ಮನವಿ ಮಾಡಿದರು.

ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಇತ್ತೀಚೆಗೆ ಜಿಲ್ಲಾ ಕೆಪಿಟಿಸಿಎಲ್- ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘ ಏರ್ಪಡಿಸಿದ್ದ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಮಹಾಸಭಾ ಈಗಾಗಲೇ ವೀರಶೈವ ಮತ್ತು ಲಿಂಗಾಯತ ಸಮಾಜದವರಲ್ಲಿ ಒಗ್ಗಟ್ಟು ಮೂಡಿಸಿ ಅವರನ್ನು ಮಹಾಸಭಾದ ಮೂಲಕ ಸಂಘಟನೆಗೆ ಒಳಪಡಿಸಿ ಸಮಾಜವನ್ನು ಬಲಪಡಿಸುವ ಮಹಾನ್ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ವಿಷಯವಾಗಿ ಇತ್ತೀಚೆಗೆ ನಮ್ಮನ್ನಗಲಿದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಿರಿಯ ರಾಜಕೀಯ ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಅವರು ಮಾಡಿದ ಪ್ರಯತ್ನ, ಪರಿಶ್ರಮವನ್ನು ಸಮಾಜ ಎಂದೆಂದಿಗೂ ಮರೆಯುವುದಿಲ್ಲ ಎಂದರು.

ಗುರು- ವಿರಕ್ತರು ಸಮಾಜವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕಾರ್ಯ ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬುದನ್ನು ಸಮಾಜದವರಲ್ಲಿ ಗಟ್ಟಿಯಾಗಿ ಮೂಡಿಸಬೇಕಿದೆ. ಈ ಪ್ರಯತ್ನವನ್ನು ಮಹಾಸಭಾ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇದಕ್ಕೆ ನಾಡಿನ ಎಲ್ಲ ಮಠಾಧೀಶರೂ ಕೃಪೆ ಮಾಡಿ ಸಾಥ್ ನೀಡಬೇಕೆಂದು ಮನವಿ ಮಾಡಿದರು.

ಮಹಾಸಭಾ ಯಾರನ್ನೂ ಟೀಕಿಸುವುದಲ್ಲಿ, ಯಾರ ವಿರುದ್ಧವೂ ಅಲ್ಲ. ವೀರಶೈವ ಲಿಂಗಾಯತರ ಅವರವರ ವೃತ್ತಿ, ಆಚರಣೆ ಏನೆ ಇದ್ದರೂ ಅದು ಅವರ ವೈಯಕ್ತಿಕ. ಆದರೆ ಧರ್ಮ- ಸಮಾಜ ಎಂದು ಬಂದಾಗ ನಾವೆಲ್ಲರೂ ಒಂದು ಎಂಬ ಸದ್ಭಾವನೆ ಬರಬೇಕು. ಶತ ಶತಮಾನಗಳಿಂದ ಒಂದಾಗಿ ಬಂದಿರುವ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಜವಾಬ್ದಾರಿಯುತ ಕಾರ್ಯಕ್ಕೆ ಮಹಾಸಭಾ ಮುಂದಾಗಿದ್ದು ಮಹಾಸಭಾಕ್ಕೆ ಆಜೀವ ಸದಸ್ಯರಾಗುವ ಮೂಲಕ ಮಹಾಸಭಾಕ್ಕೆ ಮಹಾ ಬಲ ನೀಡಬೇಕು ಎಂದರು.

ಅ.ಭಾ.ವೀ. ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರು ಸಮಾಜ ಮತ್ತು ಸಂಘಟನೆ ಕುರಿತು ಮಾತನಾಡಿದರು. ಪ್ರೊ. ಅನಿಲ ವೈದ್ಯ ಅವರಿಂದ ವಿಶೇಷ ಉಪನ್ಯಾಸ ಜರುಗಿತು.

ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ ಕಲ್ಯಾಣಶೆಟ್ಟರ ವಹಿಸಿದ್ದರು. ಗಂಗಾಧರ ಗಡ್ಡಿ, ಚನ್ನವೀರಪ್ಪ ಹುಣಶೀಕಟ್ಟಿ, ಮುರುಘರಾಜೇಂದ್ರ ಬಡ್ನಿ, ಉದಯರವಿ ಗುಡಿಮನಿ ಸೇರಿದಂತೆ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು