ಕನ್ನಡಪ್ರಭ ವಾರ್ತೆ ನಂಜನಗೂಡು
ಸಮುದಾಯದ ಬಡ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಥಾಪಿತವಾದ ವೀರಶೈವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮೂಲಕ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತಡಗಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಎನ್.ಸಿ. ಬಸವಣ್ಣ ಹೇಳಿದರು.ನಗರದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ವೀರಶೈವ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸಮುದಾಯದ ಸಾಕಷ್ಟು ಬಡವರು ಆರ್ಥಿಕ ನೆರವು ಪಡೆದು ಅಭಿವೃದ್ಧಿ ಹೊಂದಿದ್ದಾರೆ. ಜೊತೆಗೆ ಸಾಕಷ್ಟು ಬಡವರು ತಮ್ಮ ಮಕ್ಕಳ ಮದುವೆ ಮತ್ತು ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಸಮುದಾಯದ ಆರ್ಥಿಕ ನೆರವಿನ ಜೊತೆಗೆ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಸಂಘವು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ರಂಗಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.ಧರ್ಮದ ಜೊತೆಗೆ ಸಮುದಾಯದ ಸಂಘಟನೆಯೂ ಕೂಡ ಆಗಬೇಕಿದೆ, ಜೊತೆಗೆ ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆಯ ಮಕ್ಕಳಲ್ಲಿ ಬೆಳೆಸಬೇಕು ಎಂಬ ಚಿಂತನೆಯಿಂದ ಸಂಘವು ಹಲವು ಕಾರ್ಯಕ್ರಮ ರೂಪಿಸಿದೆ. ಮುಂದಿನ 20ನೇ ವರ್ಷದ ವಾರ್ಷಿಕ ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಸಂಘದ ಸ್ವಂತ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ಸೊಸೈಟಿ ಉಪಾಧ್ಯಕ್ಷ ಎಂ.ವಿ. ಶಿವಕುಮಾರ್, ನಿರ್ದೇಶಕರಾದ ವಿನಯ್ ಕುಮಾರ್, ಮಹೇಶ್, ಕೆಂಡಗಣ್ಣ ಸ್ವಾಮಿ, ಶಾಂತಕುಮಾರಿ, ಮಂಜುಳಾ, ರಮೇಶ್, ಶಿವಮಲ್ಲಪ್ಪ, ಚೈತ್ರಾ, ಪೂಜಾ, ಪ್ರಸನ್ನ ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ, ಮೈಸೂರು ಸಹಕಾರ ಬ್ಯಾಂಕ್ ನಿರ್ದೇಶಕ ಸದಾನಂದ, ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಎಂ. ಕೆಂಪಣ್ಣ ಮೊದಲಾದವರು ಇದ್ದರು.