ವಿಶ್ವಕ್ಕೆ ಸಂಸ್ಕಾರ ಜಾಗೃತಿ ಮೂಡಿಸಿದ ಕೀರ್ತಿ ವೀರಶೈವಕ್ಕೆ ಸಲ್ಲುತ್ತೆ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork | Published : Mar 9, 2024 1:30 AM

ಸಾರಾಂಶ

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಿರೇಮಠ ಸಂಸ್ಥಾನದ ಶ್ರೀ ಚನ್ನವೀರ ದೇವರು ಪಟ್ಟಾಧಿಕಾರ ಹಾಗೂ ಧರ್ಮ ಸಭೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳ ಜಾಗೃತಿ ಮೂಡಿಸುವ ಮೂಲಕ ಉತ್ತಮ ಮಾರ್ಗದರ್ಶನ ನೀಡಿದ ಕೊಡುಗೆ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾಡಿಗೆ, ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳ ಜಾಗೃತಿ ಮೂಡಿಸುವ ಮೂಲಕ ಉತ್ತಮ ಮಾರ್ಗದರ್ಶನ ನೀಡಿದ ಕೊಡುಗೆ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಿರೇಮಠ ಸಂಸ್ಥಾನದ ಶ್ರೀ ಚನ್ನವೀರ ದೇವರು ಪಟ್ಟಾಧಿಕಾರ ಹಾಗೂ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಅಣ್ಣ ಬಸವಣ್ಣವರು ಬೇರೊಂದು ಧರ್ಮದಲ್ಲಿ ಜನಿಸಿದರೂ ಪವಿತ್ರ ವೀರಶೈವ ಧರ್ಮವನ್ನು ಒಪ್ಪಿ ಅಪ್ಪಿಕೊಂಡು ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದರು. ಇದರಿಂದ ಇಂದು ಬಸವಣ್ಣನವರು ವಿಶ್ವಗುರುವಾಗಿ ಪ್ರಸಿದ್ಧಿಯಾದರು. ಇಂತಹ ಧರ್ಮದಲ್ಲಿ ಬೆಳೆದು ಬಂದ ಕುಂಟೋಜಿ ಹಿರೇಮಠಕ್ಕೆ ಹಳೆ ತಲೆಮಾರಿನ ಇತಿಹಾಸ ಕೂಡ ಇದೆ ಎಂದರು.

ಶ್ರೀ ಕುಂಟೋಜಿ ಶ್ರೀ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲೊಂದು ದಸರಾ ದರ್ಬಾರ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡು ಯಶಸಿಗೊಳಿಸಬೇಕು ಎಂದು ಬಾಳೇಹೊನ್ನೂರಿನ ರಂಭಾಪೂರಿ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಈಗಾಗಲೇ ನಮಗೆ ಸೂಚಿಸಿದ್ದಾರೆ. ಮುಂದೊಂದು ದಿನ ಆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

ಬಾಳೇಹೊನ್ನೂರಿನ ರಂಭಾಪೂರಿ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದಕ ಮಹಾಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಪೀಠ ಮತ್ತು ಮಠಗಳು ಬರಿ ಸಾಮಾಜಿಕ ಕಳಕಳಿಯ ಧರ್ಮ ಪ್ರಚಾರ ಮಾಡುವುದಲ್ಲದೇ ಶೈಕ್ಷಣಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಶ್ರೇಷ್ಠ ಕೆಲಸವನ್ನೂ ಮಾಡುತ್ತಿದೆ ಎಂದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ಧರ್ಮದವರನ್ನು ಸಮಾನತೆಯಿಂದ ಗೌರವದಿಂದ ಕಾಣುವಲ್ಲಿ ಮಠಾಧಿಪತಿಗಳ ಜವಾಬ್ದಾರಿ ಮುಖ್ಯವಾಗಿದೆ. ಜ್ಞಾನದ ಜತೆಗೆ ಸಂಸ್ಕಾರ ಪರಂಪರೆ ಹಾಗೂ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ವೀರಶೈವ ಧರ್ಮ ಪ್ರಮುಖ ಪಾತ್ರವಹಿಸಿದೆ. ಕಳೆದ ಮೂರು ದಿನಗಳಿಂದ ಕುಂಟೋಜಿ ಗ್ರಾಮದಲ್ಲಿ ಹಿರೇಮಠದ ಭಕ್ತರು ಸೇರಿಕೊಂಡು ಶ್ರೀ ಚನ್ನವೀರ ದೇವರು ಅವರ ಪಟ್ಟಾಧಿಕಾರ ಕಾರ್ಯಕ್ರಮವನ್ನು ಸಡಗರದಿಂದ ತನುಮನದಿಂದ ನಡೆಸಿಕೊಟ್ಟಿದ್ದಿರಿ. ಅದಕ್ಕೆ ಭಕ್ತರ ಪ್ರೀತಿ, ಶ್ರಮವೇ ಕಾರಣ ಎಂದು ಶ್ಲಾಘಿಸಿದರು.

ನೂತನ ಪಟ್ಟಾಧಿಕಾರಗೊಂಡ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮೊದಲು ನಾನು ಚನ್ನವೀರ ದೇವರು ಆಗಿದ್ದೆ ಎಲ್ಲ ಹರಗುರು ಚರಮೂರ್ತಿಗೆ ಹಾಗೂ ಪಂಚಪೀಠಾಧೀಶ್ವರ ಸಮ್ಮುಖದಲ್ಲಿ ಪಟ್ಟಾಧಿಕಾರಗೊಂಡು ಚನ್ನವೀರ ಶಿವಾಚಾರ್ಯ ಸ್ವಾಮಿಗಳಾಗಿದ್ದೇನೆ. ನನ್ನ ಹೆಸರು ಬದಲಾಗಿರಬಹುದು. ಆದರೆ ನಾನು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಎಲ್ಲ ವಿಶ್ವಾಸದೊಂದಿಗೆ ಮಠದ ಪರಂಪರೆ ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಗೌಡಗಾಂವನ ಹಿರೇಮಠದ ಶಿವಾಚಾರ್ಯ ರತ್ನ ಡಾ.ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಣಸೂರ ರೇವೂರ ಬಮ್ಮಲಿಂಗೇಶ್ವರ ಬೃಹ್ಮಠದ ಶ್ರೀ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು, ಎಮ್ಮಿಗನೂರ ಹಂಪೆ ಸಾವಿರದೇವರಮಠಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಮಳಲಿ ರಂಭಾಪುರಿ ಶಾಖಾಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮುತ್ತಗಿ ಹಿರೇಮಠದ ಶ್ರೀ ಪಂಡಿತರಾಧ್ಯ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯ ಸ್ವಾಮಿಗಳು, ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಆಲಮಟ್ಟಿ ಶ್ರೀ ರುದ್ರಮುನಿ ದೇವರು, ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಯುಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿದಂತೆ ಹಲವರು ಇದ್ದರು.

Share this article