ಕನ್ನಡಪ್ರಭ ವಾರ್ತೆ ತಿಪಟೂರು
ಸಾಮರಸ್ಯ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ರಾಜ್ಯದಲ್ಲಿ ವೀರಶೈವ ಸಮಾಜ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ನಡೆದರೆ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮುದಾಯದ ಜನ ಘಟಿಸಿದ ಸಮಸ್ಯೆಗಳನ್ನು ಮರೆತು ಒಗ್ಗೂಡಿ ಗಟ್ಟಿಯಾದ ಹೆಜ್ಜೆಯಿಂದ ನಡೆಯಬೇಕು ಎಂದರು.
ಮನುಷ್ಯನಲ್ಲಿ ಸ್ವಾಭಿಮಾನ, ಸಂಘಟನೆಯ ವೈಫಲ್ಯದ ಕೊರತೆಯಿಂದಾಗಿ ಸಮಾಜ ಛಿದ್ರವಾಗುತ್ತಿದೆ. ಸಂಘಟನೆಯಿಂದ ಅಸಾಧ್ಯವಾದದ್ದನ್ನು ಸಾಧ್ಯ ಮಾಡುವ ಶಕ್ತಿಯಿದೆ. ವೀರಶೈವ ಧರ್ಮ ತಮ್ಮವರಿಗೆಲ್ಲದೆ ಸಮಾಜದ ಇತರ ವರ್ಗದವರಿಗೂ ಸಹಾಯ ಮಾಡುತ್ತಾ ಬಂದಿದೆ. ಬಸವಣ್ಣನವರ ಹೆಸರು ಹೇಳುವವರು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಹೇಳಿ ದ್ವಂದ್ವ ಹುಟ್ಟುಹಾಕಿ ಕಲುಷಿತ ವಾತಾವರಣ ಉಂಟು ಮಾಡುತ್ತಿದ್ದಾರೆ. ಭೂಮಂಡಲಕ್ಕೆ ರೇಣುಕಾಚಾರ್ಯರು ವೀರಶೈವ ಧರ್ಮಕ್ಕೆ ಆದಿಯಾಗಿ, ಜಾತವೇದ ಮುನಿಗಳಿಂದ ಲಿಂಗದೀಕ್ಷೆ ಪಡೆದ ಬಸವೇಶ್ವರರ ಹಾಗೂ ಹನ್ನೆರಡನೇ ಶತಮಾನದ ಬಸವಾದಿ ಶರಣರು ವೀರಶೈವ ತತ್ವಗಳನ್ನು ಪಾಲಿಸಿ ಮುಂದುವರೆಸಿಕೊಂಡು ಬಂದಿದ್ದು, ಧರ್ಮಪೀಠಗಳು ಜ್ಞಾನದ ಜೊತೆಗೆ ಧರ್ಮದ ಆಚರಣೆಗಳು ಎಷ್ಟು ಮುಖ್ಯವೆಂಬುದನ್ನು ತಿಳಿಸುತ್ತಾ ಬಂದಿರುತ್ತಾರೆ.ಆಧುನಿಕತೆಯ ಹೆಸರಿನಲ್ಲಿ ಮಾನವೀಯತೆ ಸಂಬಂಧಗಳು ಶಿಥಿಲಗೊಳ್ಳುತ್ತಿದ್ದು, ಅವಿಭಕ್ತ ಕುಟಂಬಗಳ ಪರಿಕಲ್ಪನೆಯ ಭಾವನೆಗಳು ಜನಮನದಲ್ಲಿ ಕರಗಿಹೋಗುತ್ತಿವೆ. ಸಂಬಂಧಗಳು ಗಟ್ಟಿಯಾಗಿ ಉಳಿಯಬೇಕಾದರೆ ಧರ್ಮದ ಆಚರಣೆ, ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷಗಳನ್ನು ಖರ್ಚು ಮಾಡಿ ಶಿಕ್ಷಣ ನೀಡಿದರೂ ಇಂದು ವೃದ್ದಾಶ್ರಮಕ್ಕೆ ತಂದೆ ತಾಯಿಗಳನ್ನು ಸೇರಿಸುತ್ತಿದ್ದಾರೆ ಅಂತಹವರಿಗೆ ಧರ್ಮಾಚರಣೆ, ಸಂಸ್ಕಾರಗಳನ್ನು ಕಲಿಸಬೇಕಾಗಿದೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಕನಸು ಕಾಣುತ್ತಾ ಸ್ವಷ್ಟ ಗುರಿಯನ್ನುಟ್ಟಿಕೊಂಡು ಸಾಧನೆ ಮಾಡಬೇಕು ಎಂದರು.ಶಾಸಕ ಕೆ.ಷಡಕ್ಷರಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಸ್ವಲ್ಪ ಗೊಂದಲವಾಗಿದ್ದು ಸಮೀಕ್ಷೆಯ ಸಂದರ್ಭದಲ್ಲಿ ಸಮಾಜದ 52 ಜನ ಶಾಸಕರನ್ನು ಸಭೆ ನಡೆಸಲಾಗಿತ್ತು. ಗೊಂದಲಗಳನ್ನು ಮಠ ಮಾನ್ಯರ ಹಿರಿಯರು ಬಗೆಹರಿಸಬೇಕಾಗಿತ್ತು, ಮೂಲಭೂತವಾಗಿ ನಾವುಗಳು ಹಿಂದೂಗಳಾಗಿದ್ದು ನಂತರ ಸಮಾಜ, ಒಳಪಂಗಡಗಳು ನಮೂದಿಸಿ ಎಂದು ರಾಜಕೀಯ ಉದ್ದೇಶದಿಂದ ಸ್ವಾರ್ಥಕೊಸ್ಕರ ಅಧಿಕಾರವನ್ನು ಪಡೆಯುವುದಕ್ಕೆ ಸಮಾಜವನ್ನು ಹೊಡೆಯುವ ಕೆಲಸ ಮಾಡಬಾರದು. ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರನ್ನು ಸನ್ಮಾಸಲಾಯಿತು. ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್.ಎಂ. ಸ್ವಾಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷ ಮೇಘಾಶ್ರೀ ಭೂಷಣ್, ನಿಕಟ ಪೂರ್ವ ಅಧ್ಯಕ್ಷೆ ಯಮುನಾ ಧರಣೀಶ್, ನಗರಸಭಾ ಸದಸ್ಯರಾದ ಸಂಗಮೇಶ್, ಶಶಿಕಿರಣ್, ಪದ್ಮ, ಅಶ್ವಿನಿ, ಯೋಗೀಶ್, ಬಿಇಓ ತಾರಾಮಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್‌ರಾಜಣ್ಣ, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ನವಿಲೆ ಪರಮೇಶ್, ಜಿಲ್ಲಾ ವೀರಶೈವ ಅಧ್ಯಕ್ಷ ಪರಮೇಶ್, ನೌಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ರಾಜ್ಯಾಧ್ಯಕ್ಷ ಸೋಮಶೇಖರ, ಕಾರ್ಯದರ್ಶಿ ಪ್ರಸನ್ನಕುಮಾರ್, ಮಾದಿಹಳ್ಳಿ ಪ್ರಕಾಶ್, ಜಲಾಕ್ಷಮ್ಮ, ಮಂಗಳಗೌರಮ್ಮ, ತಾ ಸಂಘದ ಕಾರ್ಯದರ್ಶಿ ಎಸ್.ಆರ್.ಸ್ವಾಮಿ, ಖಚಾಂಚಿ ಚಿದಾನಂದ್ ಮತ್ತಿತರಿದ್ದರು.ಫೋಟೋ 20-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸನ್ಮಾನ ಸಮಾರಂಭವನ್ನು ಬಾಳೆಹೊನ್ನೂರು ರಂಬಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.