ಹುಬ್ಬಳ್ಳಿ: ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಕೆಲವರು ಸಮಾಜ ಇಬ್ಭಾಗ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ವೀರಶೈವ -ಲಿಂಗಾಯತ ಒಂದೇ ಎಂದು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಸೆ. ೧೯ರಂದು ನಗರದ ನೆಹರು ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಹಿಂದಿನಿಂದರೂ ವೀರಶೈವ ಲಿಂಗಾಯತ ಒಂದೇ ಎಂದು ನಿಲುವು ತಾಳಿದೆ. ಅದೇ ನಿಲುವಿಗೆ ಈಗಲೂ ಬದ್ಧವಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗ ನಾವು ಖಂಡಿಸಿದ್ದೇವೆ. ಬಸವ ಸಂಸ್ಕೃತಿ ಹೆಸರಿನಲ್ಲಿ ಯಾತ್ರೆ ಮಾಡಿ ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದು ಖಂಡನೀಯ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ: ವೀರಶೈವ ಲಿಂಗಾಯತ ಎನ್ನುವುದು ತತ್ವ ಪ್ರಧಾನ ಧರ್ಮ. ವ್ಯಕ್ತಿ ಪ್ರದಾನವಲ್ಲ. ಕೆಲವರು ಬಸವ ಸಂಸ್ಕೃತಿ ಯಾತ್ರೆಯಲ್ಲಿ ವೈದಿಕ ಪರಂಪರೆ ವಿರೋಧಿಸುತ್ತಿದ್ದಾರೆ. ಆದರೆ, ವಿರೋಧಿಸುವವರೇ ಬೃಹತ್ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರ ನಡೆ-ನುಡಿ ಭಿನ್ನವಾಗಿದೆ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಯಾವುದೇ ಕಾಲಕ್ಕೂ ಆಗಬಾರದು ಎಂದರು.ಬಸವ ಸಂಸ್ಕೃತಿ ಯಾತ್ರೆ ತಂಡ ದುರುದ್ದೇಶ ಇಟ್ಟುಕೊಂಡು ಹೊರಟಿದೆ. ಹಿಂದೆ ಪ್ರತ್ಯೇಕ ಲಿಂಗಾಯತ ಎಂದರು, ಇದೀಗ ಬಸವಧರ್ಮ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರಲ್ಲಿ ಬದ್ಧತೆ ಕೊರತೆ ಇದೆ. ಅವರಲ್ಲಿ ಸಾಕಷ್ಟು ಗೊಂದಲಗಳೂ ಇವೆ. ಸಮಾಜವನ್ನು ವಿಘಟನೆ ಮಾಡುವುದು ಅವರ ಗುರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸೆ. 19ರಂದು ನಡೆಯಲಿದ್ದು, ಹಾಲಿ ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾವೇಶ ಶಕ್ತಿ ಪ್ರದರ್ಶನವಲ್ಲ. ಸಮಾಜದ ಉಳಿವಿನ ಪ್ರದರ್ಶನ. ಶಕ್ತಿ ಪ್ರದರ್ಶನ ಅವರು ಮಾಡುತ್ತಿದ್ದಾರೆ, ಮಾಡಲಿ ಎಂದರು.
ಖಾವಿ ತೊಟ್ಟ ಮಠಾಧೀಶರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಯಾರು ವೀರಶೈವ -ಲಿಂಗಾಯತ ತತ್ವ ಪ್ರಧಾನ ಎಂದು ಒಪ್ಪಿಕೊಳುತ್ತಾರೋ ಅವರೆಲ್ಲ ಸಮಾವೇಶಕ್ಕೆ ಬರುತ್ತಾರೆ. ರಾಜ್ಯದ ಎಲ್ಲ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಎಷ್ಟೇ ದೊಡ್ಡ ಮಠಾಧೀಶರಿದ್ದರೂ ಸಮಾವೇಶಕ್ಕೆ ಪ್ರತ್ಯೇಕ ಆಹ್ವಾನವಿಲ್ಲ. ಪತ್ರಿಕಾಗೋಷ್ಠಿಯೇ ಆಹ್ವಾನ ಎಂದು ತಿಳಿದು ಮತ್ತು ವೀರಶೈವ ಲಿಂಗಾಯತ ಒಂದೇ ಎಂದು ಪ್ರತಿಪಾದಿಸುವವರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಆಂಧ್ರಪ್ರದೇಶದ ಸೋಮಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ಸ್ವತಂತ್ರ ಧರ್ಮ. ವೀರಶೈವ, ಲಿಂಗಾಯತ ಬೇರೆ ಬೇರೆ ಅಲ್ಲ. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಿ ಗೊಂದಲ ನಿವಾರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮತ್ತು ನೆರೆ ರಾಜ್ಯದ ವಿವಿಧ ಮಠಾಧೀಶರು ಭಾಗವಹಿಸಿದ್ದರು.