ದಾವಣಗೆರೆಯಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ ಸಮಾಜದ ನಾಯಕರು, ಸಚಿವರು, ಶಾಸಕರು, ಸ್ವಾಮೀಜಿಗಳು. ವೈಜ್ಞಾನಿಕವಾಗಿ ಮತ್ತೊಮ್ಮೆ ಜಾತಿ ನಡೆಸುವಂತೆ ಒಕ್ಕೊರಲ ಕೂಗು, ಒಳ ಪಂಗಡಗಳ ಭೇದ ಮರೆತು ಒಂದಾಗುವಂತೆ ಸಮುದಾಯದ ಜನತೆಗೆ ಸಂದೇಶ.ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ವೀರಶೈವ-ಲಿಂಗಾಯತ ಸಮಾಜವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು, ರಾಜ್ಯದಲ್ಲಿ ಹೊಸದಾಗಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ಕೈಗೊಳ್ಳಬೇಕು, ಒಳ ಪಂಗಡಗಳನ್ನೆಲ್ಲಾ ಮರೆತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೂರಿನಡಿ ಒಗ್ಗೂಡಬೇಕೆಂಬ ಸಂದೇಶವನ್ನು ನಾಡಿನ ಗುರು-ವಿರಕ್ತರು ಹಾಗೂ ಸಮಾಜದ ನಾಯಕರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಸಾರಿದ್ದಾರೆ.ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡ ಎರಡು ದಿನಗಳ 24ನೇ ಮಹಾ ಅಧಿವೇಶನದ ಆರಂಭದಿಂದಲೂ ವೀರಶೈವ ಲಿಂಗಾಯತ ಸಮುದಾಯ ಒಳ ಪಂಡಗ ಮರೆತು, ಮಹಾಸಭಾದಡಿ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಬೇಕು, ಕೇಂದ್ರದ ಓಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸೇರ್ಪಡೆಯಾಗಬೇಕು, ರಾಜ್ಯದಲ್ಲಿ ಹೊಸದಾಗಿ ಆರ್ಥಿಕ, ಸಾಮಾಜಿಕ ಗಣತಿ ಆಗಬೇಕೆಂಬ ಸಂದೇಶ ರವಾನಿಸಲಾಯಿತು.
ಮರುಗಣತಿ ಮಹಾಸಭಾದ ನಿಲುವಾಗಿದೆ:ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ನಾವ್ಯಾರೂ ಜಾತಿ ಗಣತಿ, ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿರೋಧಿಗಳಲ್ಲ. ವಾಸ್ತವಾಂಶಗಳನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಳ್ಳಬೇಕೆಂಬುದು ಮಹಾಸಭಾದ ಸ್ಪಷ್ಟ ನಿಲುವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇವೆ. ಪಕ್ಷಾತೀತವಾಗಿ ಈ ಬಗ್ಗೆ ನಿರ್ಣಯ ಕೈಗೊಂಡಿದ್ದೇವೆ. ಎಲ್ಲಾ ಜಾತಿಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಯಾವುದಾದರೂ ಸಮುದಾಯ ಇದ್ದರೆ ಅದು ವೀರಶೈವ-ಲಿಂಗಾಯತ ಧರ್ಮ ಎಂದರು.
ವೀರಶೈವ-ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ. ವೀರಶೈವ ಲಿಂಗಾಯತರು ಹಾಳಾದರೆ ರಾಜ್ಯವೂ ಹಾಳಾಗುತ್ತದೆ. ನಮ್ಮದು ಹೇಡಿ ಸಮುದಾಯವಲ್ಲ. ಆರ್ಥಿಕವಾಗಿ ನಮ್ಮ ಸಮುದಾಯ ಮೊದಲು ಸದೃಢವಾಗಬೇಕು. ನಾವು ಸದೃಢರಾದರೆ ಇತರೆ ಸಮುದಾಯಗಳನ್ನೂ ಒಟ್ಟೊಟ್ಟಿಗೆ ಕೊಂಡೊಯ್ಯುತ್ತೇವೆ. ಇಂದು ನಮ್ಮ ಸಮಾಜ ಕವಲುದಾರಿಯಲ್ಲಿದೆ. ನಮ್ಮಲ್ಲಿ ಕೆಲವರು ಶ್ರೀಮಂತರಿದ್ದೇವೆ. ಹಾಗೆಂದು ಇಡೀ ಸಮಾಜದವರೆಲ್ಲಾ ಶ್ರೀಮಂತರಲ್ಲ. ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಇಂತಹ ಬದಲಾವಣೆ ಈಗ ಮೂಡುತ್ತಿದ್ದು, ಎಲ್ಲಾ ಜಾತಿ, ಮತ, ಪಂಥಗಳನ್ನು ಮೀರಿ, ಅಪ್ಪಿಕೊಳ್ಳುವ ಸಮುದಾಯ ನಮ್ಮದು ಎಂದು ಅವರು ತಿಳಿಸಿದರು.ಕೇಂದ್ರದ ಓಬಿಸಿ ಪಟ್ಟಿಯಲ್ಲಿ 1993ರಲ್ಲೇ ನಮ್ಮ ಸಮುದಾಯ ಬಿಟ್ಟು ಹೋಗಿದೆ. ಅಭಿವೃದ್ಧಿ ಹೊಂದಿದ ಎಷ್ಟೋ ಸಮುದಾಯಗಳು ಕೇಂದ್ರದ ಓಬಿಸಿ ಪಟ್ಟಿಯಲ್ಲಿದ್ದು, ನಮ್ಮ ಸಮುದಾಯವೇ ಇಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ, ಕೇಂದ್ರಕ್ಕೂ ಸಹ ನಮ್ಮ ಸಮಾಜವನ್ನು ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರುತ್ತೇವೆ. ಶೇ.27ರಷ್ಟು ಮೀಸಲಾತಿ ಹೊಂದಿರುವ ಕೇಂದ್ರದ ಓಬಿಸಿ ಪಟ್ಟಿಗೆ ವೀರಶೈವ-ಲಿಂಗಾಯತ ಸೇರ್ಪಡೆ ಮಾಡುವಂತೆ ಮಹಾಸಭಾ ಒತ್ತಡ ಹೇರಲಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಕಾಂತರಾಜ ಆಯೋಗದ ನಾವು ಒಪ್ಪುದಿಲ್ಲ:ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ವೀರಶೈವ-ಲಿಂಗಾಯತ ಒಳ ಪಂಗಡಗಳೆಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದಡಿ ಒಗ್ಗೂಡಬೇಕು. ಹಾಗಾದಾಗ ಮಾತ್ರ ವೀರಶೈವ ಸಮುದಾಯ ಬಲಿಷ್ಠವಾಗಿರುತ್ತದೆ. ಕಾಂತರಾಜ ಆಯೋಗದ ಜಾತಿ ಸಮೀಕ್ಷೆ ವರದಿಯನ್ನು ನಾವ್ಯಾರೂ ಒಪ್ಪುವುದಿಲ್ಲ. ರಾಜ್ಯದಲ್ಲಿ ಒಂದೂವರೆ ಕೋಟಿಗೂ ಅದಿಕ ಜನಸಂಖ್ಯೆಯ ದೊಡ್ಡ ಸಮಾಜ ನಮ್ಮದು. ಹೊಸದಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂಬುದಾಗಿ ನಮ್ಮ ಮುಖ್ಯ ಬೇಡಿಕೆ ಎಂದರು.
ಜಾತಿ ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಕಡಿಮೆ ತೋರಿಸಿ, ಯಾರಾದರೂ ಲಾಭ ಮಾಡಿಕೊಳ್ಳಬೇಕೆಂಬ ಭ್ರಮೆ ಯಲ್ಲಿದ್ದರೆ ಅದು ಅಂತಹವರ ಹಗಲುಗನಸಷ್ಟೇ. ಅಭಾವೀಮ ರಾಷ್ಟ್ರೀಯ ಅಧ್ಯಕ್ಷರು, ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಕೈಗೊಳ್ಳುವ ಯಾವುದೇ ನಿರ್ಣಯ, ನಿರ್ಧಾರಗಳಿಗೆ ನಾವು ಬದ್ಧರಿರುತ್ತೇವೆ. ನಮ್ಮ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂಬ ಮಹಾಸಭಾ ನಿಲುವೇ ನಮ್ಮ ನಿಲುವು ಸಹ ಆಗಿದೆ ಎಂದು ಅವರು ಸ್ಪಷ್ಪಪಡಿಸಿದರು.............................