ಧಾರವಾಡ:
ಜುಲೈ 21ರಂದು ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ಅವೈಜ್ಞಾನಿಕ ಹಾಗೂ ನಿಯಮ ಬಾಹಿರವಾಗಿದೆ ಎಂದು ಮಹಾಸಭಾ ಮಾಜಿ ಅಧ್ಯಕ್ಷ ಗುರುರಾಜ ಹುಣಸಿಮರದ ಗಂಭೀರ ಆರೋಪ ಮಾಡಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಾವಳಿ ಪ್ರಕಾರ ಚುನಾವಣೆಗೂ ಮೂರು ತಿಂಗಳು ಮೊದಲು ಚುನಾವಣಾಧಿಕಾರಿ ನೇಮಿಸಬೇಕು. ಆದರೆ, ಬರೀ 15 ದಿನಗಳ ಹಿಂದಷ್ಟೇ ನೇಮಿಸಲಾಗಿದೆ. ಜತೆಗೆ ಅವರಿಗೆ ತರಬೇತಿ ಸಹ ನೀಡಿಲ್ಲ. ಚುನಾವಣಾ ಏಜೆಂಟ್ ನೇಮಿಸಿಲ್ಲ. 1500 ಮತದಾರರಿಗೆ ಕೇವಲ ಒಂದೇ ಮತಗಟ್ಟೆ ಸ್ಥಾಪಿಸಲಾಗಿತ್ತು. ಹೀಗೆ ಚುನಾವಣೆಯಲ್ಲಿ ಯಾವುದೇ ಮಹಾಸಭಾ ಕಾನೂನು ಪಾಲನೆ ಆಗಿಲ್ಲ. ಅವ್ಯವಸ್ಥಿತ ಚುನಾವಣೆ ನಡೆಸಿದ್ದಾಗಿ ಆರೋಪಿಸಿದರು.
ಅವಧಿ ಮೀರಿ ಸದಸ್ಯತ್ವ:ಅವ್ಯವಸ್ಥಿತ ಚುನಾವಣೆ ಕುರಿತು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಚುನಾವಣಾಧಿಕಾರಿಗೂ ಮೊದಲೇ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಮಹಾಸಭಾಕ್ಕೆ ಮೇ 25ರೊಳಗೆ ಸದಸ್ಯರಾದವರು ಚುನಾವಣೆಗೆ ಸ್ಪರ್ಧಿಸಲು, ಮತ ಚಲಾವಣೆಗೆ ಅರ್ಹರು. ನಂತರ ಸದಸ್ಯತ್ವ ಪಡೆದವರಗೆ ಸದಸ್ಯತ್ವ ಮಾತ್ರವೇ ನೀಡಬೇಕು ಹೊರತು ಮತದಾನಕ್ಕೆ ಅಲ್ಲ ಎಂಬ ನಿಯಮವಿದೆ. ಇಷ್ಟಾಗಿಯೂ ಮೇ 25ರ ನಂತರವೂ ಸದಸ್ಯತ್ವ ನೀಡಿ ಮತದಾನ ಮಾಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮಹಾಸಭಾ ಕಾಂಗ್ರೆಸ್ ಕಚೇರಿ ಆಗಿದೆ. ಹಣಕ್ಕಾಗಿ ವೀರಶೈವ-ಲಿಂಗಾಯತ ಅಲ್ಲದವರಿಗೂ ಸದಸ್ಯತ್ವ ನೀಡಿದೆ. ಜಿಲ್ಲೆಯಲ್ಲಿ 600 ಮತದಾರರು ಅನ್ಯ ಜಾತಿಯುಳ್ಳವರು ಇದ್ದಾರೆ ಎಂದು ಆರೋಪಿಸಿದರು.
ಸಮಾಜದ ಮುಖಂಡರು, ಶಾಸಕರಾದ ವಿನಯ ಕುಲಕರ್ಣಿ ಜೂ. 6ರಂದು ₹ 5 ಲಕ್ಷ ಹಣ ಭರಿಸಿ 500 ಜನರ ಸದಸತ್ವ ಮಾಡಿಸಿದ್ದಾರೆ. ವಿನಯ ಕುಲಕರ್ಣಿ ಅವರ ಖಾತೆಯಿಂದ ಮಹಾಸಭಾಕ್ಕೆ ಹಣ ಜಮೆ ಆಗಿರುವ ಕುರಿತು ತಮ್ಮ ಬಳಿ ದಾಖಲೆಗಳಿವೆ ಎಂದರು.ಷಡ್ಯಂತ್ರದ ರಾಜಕಾರಣ:
ಈ ಚುನಾವಣೆಯಲ್ಲಿ ಶಾಸಕರಾದ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಷಡ್ಯಂತ್ರದ ಹಿನ್ನೆಲೆಯಲ್ಲಿ ನನಗೆ ಸೋಲಾಗಿದೆ. ವಿನಯ ಪತ್ನಿ ಶಿವಲೀಲಾ ಮತದಾರರಿಗೆ ಸ್ವತಃ ಕರೆ ಮಾಡಿ ಪಂಚಮಸಾಲಿ ಸಮಾಜಕ್ಕೆ ಮತ ಹಾಕುವಂತೆ ಹೇಳಿದ್ದಾರೆ. ಹಾಗಾದರೆ, ನಾನು ದಲಿತನೇ? ಅಲ್ಯಸಂಖ್ಯಾತನೇ? ಎಂದು ಪ್ರಶ್ನಿಸಿದ ಹುಣಸಿಮರದ, ಗಂಡ-ಹೆಂಡತಿ ರಾಜಕಾರಣ ನಾಚಿಗೇಡು. ಊರಿಗೆ ಬರದ ಸ್ಥಿತಿ ಬಂದರೂ ಇನ್ನೂ ಬುದ್ಧಿ ಕಲಿತಿಲ್ಲ. ಇಬ್ಬರೂ ಶಾಸಕರಿಗೆ ಲಿಂಗಾಯತದ ಒಳಪಂಗಡಗಳು ಬೆಳೆಯದಂತೆ ನೋಡುತ್ತಿದ್ದಾರೆ. ಷಡ್ಯಂತ್ರದ ಹೀನ ರಾಜಕೀಯ ಬೇಕಾ? ಇನ್ನು, ಅಪ್ಪ-ಮಗ ಇಬ್ಬರೂ ಮೂವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದು, ಮಹಾಸಭಾಕ್ಕೆ ಮತ್ತೊಮ್ಮೆ ಅಧ್ಯಕ್ಷನಾಗಲು ವಿರೋಧ ಮಾಡಿದರು ಎಂದು ಪರೋಕ್ಷವಾಗಿ ಬೆಲ್ಲದ ಕುಟುಂಬದ ಬಗ್ಗೆ ಗುರುರಾಜ ಹುಣಸೀಮರದ ಹರಿಹಾಯ್ದರು.ಕಾನೂನು ಮೊರೆ:ಮಹಾಸಭಾದ ಬೋಗಸ್ ಮತದಾರ ಪಟ್ಟಿ ರದ್ಧತಿ, ಚುನಾವಣಾ ಅಧಿಕಾರಿ ನೇಮಕ, ಅವವ್ಯಸ್ಥಿತ-ಅವೈಜ್ಞಾನಿಕ ಚುನಾವಣೆ, ಕಾನೂನು ಬಾಹಿರ ಮತದಾನ ಹಲವು ವಿಷಯ ಬಗ್ಗೆ ಕಾನೂನು ಹೋರಾಟ ಕೈಗೊಂಡಿದ್ದೇನೆ. ಜು.17ಕ್ಕೆ ಹೈಕೋರ್ಟ್ ಮೊರೆ ಹೋಗಿದ್ದು, ಜು.18ಕ್ಕೆ ನ್ಯಾಯಮೂರ್ತಿ ಪ್ರದೀಪಸಿಂಗ್ ವಿಚಾರಣೆ ನಡೆಸಿದ್ದು, ಜು. 19ಕ್ಕೆ ನ್ಯಾಯಾಮೂರ್ತಿ ಸಚೀನ್ ಮಗದುಮ್ ಅವರು ಶ್ಯಾಮನೂರು ಶಿವಶಂಕ್ರಪ್ಪ, ಈಶ್ವರ ಖಂಡ್ರೆ, ರೇಣುಕಾಪ್ರಸಾದ, ದ್ಯಾಬೇರಿ ಅವರಿಗೆ ಮತದಾರರ ಪಟ್ಟಿ ರದ್ಧತಿಗೆ ನೋಟಿಸ್ ನೀಡಿದ್ದಾರೆ. ಇಷ್ಟಾಗಿಯೂ ಚುನಾವಣೆ ನಡೆಸಿದ್ದನ್ನು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇನೆ ಎಂದು ಗುರುರಾಜ ಹುಣಸಿಮರದ ಹೇಳಿದರು.