ಧಾರವಾಡ: ಜೀವಾತ್ಮ ಪರಮಾತ್ಮನಾಗಲು ಉತ್ಕೃಷ್ಟ, ಅಲೌಕಿಕ ಗಾಢ ಚಿಂತನೆ ಬೋಧಿಸುವ ವೀರಶೈವ ಪಂಚಸೂತ್ರೀಯ ಪ್ರವಚನ ಒಂದು ಮೇರು ದಾರ್ಶನಿಕ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ವೀರಶೈವವು ಯಾವುದೋ ಒಂದು ಜಾತಿ, ವರ್ಗ, ಪಂಗಡ ಸೂಚಿಸದೇ, ಶಿವನ ಆಧ್ಯಾತ್ಮದ ಅನುಸಂಧಾನ ಮಾರ್ಗವಾಗಿದೆ. ಈ ಪಥದಲ್ಲಿ ಮುನ್ನಡೆಯಲು ಪಂಚಾಚಾರ್ಯರು ಐದು ಮಹರ್ಷಿಗಳಿಗೆ ಬೋಧಿಸಿದ ವಿಶಿಷ್ಟ ತತ್ವ ಪ್ರತಿಪಾದನೆ ಮಾಡಬೇಕು ಎಂದರು.
ವೀರಶೈವ ಧರ್ಮ ಸಿದ್ಧಾಂತಕ್ಕೆ ಸ್ಮತಿ, ಆಗಮ, ಶ್ರೀಸಿದ್ಧಾಂತ ಶಿಖಾಮಣಿ ಇತ್ಯಾದಿ ಅನೇಕ ಪ್ರಾಚೀನ ಗ್ರಂಥಗಳ ಆಧಾರದಲ್ಲಿ ಪಂಚಸೂತ್ರಗಳನ್ನು ವಿಸ್ತೃತವಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದ ಅತ್ಯಂತ ಸಾಮಾನ್ಯ ವ್ಯಕ್ತಿಯೂ ಪಂಚಸೂತ್ರಗಳನ್ನು ಅರ್ಥಮಾಡಿಕೊಳ್ಳಬಹುದು. ವಿವಿಧ ಮಠಾಧೀಶರು, ಉಪನ್ಯಾಸಕರು, ಪುರಾಣಿಕರು, ಪ್ರವಚನಕಾರರು ಈ ಗ್ರಂಥದ ಆಧಾರದಲ್ಲಿ ವಿಶೇಷ ಪಂಚಸೂತ್ರ ಪ್ರವಚನಗಳನ್ನು ಮಾಡಲು ಸಹಕಾರಿ. ಪಂಚಸೂತ್ರೀಯ ಪ್ರವಚನ ಶಿವಾದೈತ ಸಿದ್ಧಾಂತದ ಮಹಾಕಾವ್ಯ. ವೀರಶೈವ ತತ್ವಾನುಯಾಯಿಗಳ ಪಾಲಿಗೆ ಒಂದು ಅತ್ಯಮೂಲ್ಯ ಗ್ರಂಥ. ಈ ಗ್ರಂಥ ಸಾಹಿತ್ಯದ ನಾಡು ಧಾರವಾಡದಲ್ಲಿ ರೇಣುಕಾಚಾರ್ಯರ ಜಯಂತಿಯಲ್ಲಿ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ ಎಂದರು.ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ರೇಣುಕಾಚಾರ್ಯರು ‘ಶ್ರೀಸಿದ್ಧಾಂತ ಶಿಖಾಮಣಿ’ಯ ಮೂಲಕ ನಿರೂಪಿಸಿರುವ ತತ್ವಪ್ರತಿಪಾದನೆ ಕೇವಲ ವೀರಶೈವ-ಲಿಂಗಾಯತರನ್ನೇ ಕೇಂದ್ರೀಕರಿಸಿರದೇ ಸಕಲ ಜೀವಾತ್ಮರಿಗೂ ಅನ್ವಯವಾಗುತ್ತದೆ ಎಂದರು.
ಹೊಸಯಲ್ಲಾಪೂರ ಹಿರೇಮಠದ ಶಶಾಂಕ ದೇವರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಮಾ ಕೊರವರ ಮಾತನಾಡಿದರು. ಹಿರಿಯ ಸಂಶೋಧಕ ಪ್ರೊ. ಆರ್.ಎಂ. ಷಡಕ್ಷರಯ್ಯ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಶಂಕರ ಶೆಳಕೆ, ವಕೀಲ ಅರುಣ ಚರಂತಿಮಠ, ಮುಖಂಡರಾದ ಸಿ.ಎಸ್. ಪಾಟೀಲ, ಮಂಜುನಾಥ ಸಾಲಿಮಠ, ಆಚರಣಾ ಸಮಿತಿ ಪದಾಧಿಕಾರಿಗಳಾದ ಸರೋಜಾ ಪಾಟೀಲ, ರಾಜೇಂದ್ರ ಹಿರೇಮಠ, ಈರಯ್ಯ ರಾಚಯ್ಯನವರ, ಬಸವರಾಜ ಕುರಹಟ್ಟಿಮಠ, ಚನ್ನಬಸಯ್ಯ ಬಾಲೇದಮಠ, ಮಹೇಶ ಗುರಸ್ಥಳಮಠ, ಜಗದೀಶ ಹಿರೇಮಠ ಇದ್ದರು. ಹೊಸಯಲ್ಲಾಪುರ ಹಿರೇಮಠ ಗದಗಯ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಿರೇಮಠ ಸ್ವಾಗತಿಸಿದರು.ಯುಗಮಾನೋತ್ಸವ