ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಅಲ್ಲಂ ಗುರುಬಸವರಾಜ್

KannadaprabhaNewsNetwork | Published : Mar 28, 2024 12:46 AM

ಸಾರಾಂಶ

ತೀವ್ರ ಕುತೂಹಲ ಮೂಡಿಸಿದ್ದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ನಗರದಲ್ಲಿ ಜರುಗಿದ ಚುನಾವಣೆ ವೇಳೆ ಅಚ್ಚರಿ ಎಂಬಂತೆ ಹಿರಿಯರ ತಂಡದ ಸದಸ್ಯರು ಅಧಿಕಾರದ ಗದ್ದುಗೆ ಹಿಡಿದರು.

ಬಳ್ಳಾರಿ: ತೀವ್ರ ಕುತೂಹಲ ಮೂಡಿಸಿದ್ದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ನಗರದಲ್ಲಿ ಜರುಗಿದ ಚುನಾವಣೆ ವೇಳೆ ಅಚ್ಚರಿ ಎಂಬಂತೆ ಹಿರಿಯರ ತಂಡದ ಸದಸ್ಯರು ಅಧಿಕಾರದ ಗದ್ದುಗೆ ಹಿಡಿದರು. ಯುವಕ ವೃಂದಕ್ಕೆ ಬಹುಮತದ ಕಾರ್ಯಕಾರಿ ಸಮಿತಿ ಸದಸ್ಯ ಬಲ ಇದ್ದಾಗಲೂ ತಂಡದ ಒಳ ಜಗಳದಿಂದಾಗಿ ಹಿರಿಯರ ತಂಡಕ್ಕೆ ಅಧಿಕಾರ ಒಲಿದು ಬಂತು.ಸಂಘದ ಅಧ್ಯಕ್ಷರಾಗಿ ಹಿರಿಯರ ತಂಡದ ಅಲ್ಲಂ ಗುರುಬಸವರಾಜ್, ಕಾರ್ಯದರ್ಶಿಯಾಗಿ ಡಾ.ಅರವಿಂದ ಪಾಟೀಲ್ ಆಯ್ಕೆಯಾದರು.ಸಂಘದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ರಾಮನಗೌಡರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11ಕ್ಕೆ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತು. ಕೈ ಎತ್ತುವ ಮೂಲಕ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಲಿ ಎಂದು ಯುವಕ ವೃಂದದ ಸದಸ್ಯರು ಆಗ್ರಹಿಸಿದರು. ಇದಕ್ಕೆ ಹಿರಿಯರ ತಂಡ ಆಕ್ಷೇಪಿಸಿತು. ಈ ಹಿಂದಿನಂತೆ ಗುಪ್ತ ಮತದಾನ ನಡೆಯಲಿ ಎಂದು ಒತ್ತಾಯಿಸಿತು. ಎರಡು ತಂಡಗಳ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಗುಪ್ತ ಮತದಾನದಿಂದಲೇ ಆಯ್ಕೆ ಪ್ರಕ್ರಿಯೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ತಂಡದಿಂದ ಅಲ್ಲಂ ಗುರುಬಸವರಾಜ್, ಯುವ ವೃಂದದಿಂದ ಡಾ.ಮಹಾಂತೇಶ್ ಸ್ಪರ್ಧೆಯಲ್ಲುಳಿದರು. ಅಲ್ಲಂ ಗುರುಬಸವರಾಜ್ ಪರ 17 ಮತ, ಮಹಾಂತೇಶ್ ಪರ 12 ಮತ ಬಂದವು. ಹೆಚ್ಚು ಮತ ಪಡೆದ ಅಲ್ಲಂ ಬಸವರಾಜ್‌ರನ್ನು ಸಂಘದ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಾನೆಕುಂಟೆ ಬಸವರಾಜ್ 16 ಮತ ಪಡೆದು ಆಯ್ಕೆಗೊಂಡರು. ಯುವಕ ವೃಂದದಿಂದ ಸ್ಪರ್ಧಿಸಿದ್ದ ಸಾಹುಕಾರ್ ಸತೀಶಬಾಬು 13 ಮತ ಪಡೆದು ಪರಾಭವಗೊಂಡರು. ಸಹ ಕಾರ್ಯದರ್ಶಿ ಸ್ಥಾನಕ್ಕೆ ಯುವಕ ವೃಂದದ ಯಾಳ್ಪಿ ಪಂಪನಗೌಡ, ಹಿರಿಯರ ತಂಡದ ಕ್ಯಾತ್ಯಾಯಿನಿ ಮರಿದೇವಯ್ಯ ಸ್ಪರ್ಧಿಸಿದ್ದರು. ಯಾಳ್ಪಿ ಪಂಪನಗೌಡ ಗೆದ್ದು ಆಯ್ಕೆಗೊಂಡರು. ಖಜಾಂಚಿಯಾಗಿ ಬೈಲುವದ್ದಿಗೇರಿ ಎರಿಸ್ವಾಮಿ ಆಯ್ಕೆಯಾದರು.ಮೂರು ವರ್ಷದ ಅವಧಿಯ ಸಂಘದ ಚುನಾವಣೆಯಲ್ಲಿ ಯುವಕ ವೃಂದ, ಹಿರಿಯರ ತಂಡದ ನಡುವೆ ಪೈಪೋಟಿಯಿತ್ತು. ಸಂಘದ 30 ಸದಸ್ಯರ ಪೈಕಿ 16 ಜನರು ಯುವಕ ವೃಂದಿಂದ ಗೆಲುವು ಪಡೆದಿದ್ದರೆ, 13 ಮಂದಿ ಹಿರಿಯರ ತಂಡದಿಂದ ಜಯಿಸಿದ್ದರು. ಓರ್ವ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು.ಯುವಕ ವೃಂದಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಅವರಿಗೇ ಅಧಿಕಾರ ಎನ್ನಲಾಗಿತ್ತು. ಆದರೆ, ಯುವಕ ವೃಂದದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಡಾ.ಭಾಗ್ಯಲಕ್ಷ್ಮೀ, ಡಾ.ಮಹಾಂತೇಶ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇದು ಯುವಕ ವೃಂದದಲ್ಲಿ ಬಿರುಕು ಮೂಡಲು ಕಾರಣವಾಯಿತು. ಇವರ ಅಸಮಾಧಾನ, ಒಳ ಬೇಗುದಿ ಹಿರಿಯರ ತಂಡ ಅಧಿಕಾರ ಗದ್ದುಗೆ ಹಿಡಿಯಲು ಆಸ್ಪದ ಒದಗಿಸಿತು.ಚುನಾವಣೆಯಲ್ಲಿ ಹಿರಿಯರ ತಂಡ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತಂಡದ ಸದಸ್ಯರು, ಬೆಂಬಲಿಗರು ಸಂಭ್ರಮಿಸಿದರು. ಹಿರಿಯರ ತಂಡದ ಮಾರ್ಗದರ್ಶಕ ಉಡೇದ ಬಸವರಾಜ್, ಪ್ರಭುಸ್ವಾಮಿ, ಎರಿಸ್ವಾಮಿ ಬೂದಿಹಾಳಮಠ, ಎನ್‌.ವೀರಭದ್ರಗೌಡ, ಪ್ಯಾಟ್ಯಾಳ್ ಬಸವರಾಜ್, ಯಲ್ಲನಗೌಡ ಶಂಕರಬಂಡೆ, ಪ್ರತಾಪಗೌಡ, ರೂಪನಗುಡಿ ಬಸವರಾಜ್ ಸೇರಿ ಅನೇಕರು ಇದ್ದರು.ಡಾ.ಭಾಗ್ಯಲಕ್ಷ್ಮೀ ರಾಜೀನಾಮೆ:ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಯುವಕ ವೃಂದದ ಡಾ.ಭಾಗ್ಯಲಕ್ಷ್ಮೀ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷರ ಆಯ್ಕೆ ವೇಳೆ ನಡೆದ ಬೆಳವಣಿಗೆಯಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ರಾಜೀನಾಮೆ ಅಂಗೀಕಾರವಾಗಿಲ್ಲ ಎನ್ನಲಾಗಿದೆ. ಯುವಕ ವೃಂದದಲ್ಲಿ ಅತಿಹೆಚ್ಚು ಮತ (1223) ಪಡೆದಿದ್ದ ಭಾಗ್ಯಲಕ್ಷ್ಮೀ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.

Share this article