ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಕೊಡುಗೆ ಅಪಾರ: ಉಜ್ಜಯಿನಿ ಶ್ರೀ

KannadaprabhaNewsNetwork |  
Published : Sep 22, 2026, 02:15 AM IST
ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಹಾಗೂ ಬಳ್ಳಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ 50ನೇ ಸುವರ್ಣ ಮಹೋತ್ಸವ ಸಮಾರಂಭವನ್ನು ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

1916ರಲ್ಲಿ ಸ್ಥಾಪನೆಯಾದ ವೀರಶೈವ ವಿದ್ಯಾವರ್ಧಕ ಸಂಘವು ಹಲವು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಜಾತಿ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಅನ್ನ, ಅಕ್ಷರ ಮತ್ತು ದಾಸೋಹದ ಮೂಲಕ ಸಮಾಜದ ಎಲ್ಲ ವರ್ಗದ ಜನರ ಬದುಕಿಗೆ ಬೆಳಕಾಗಿರುವ ಕೀರ್ತಿ ವೀರಶೈವ ಸಮಾಜಕ್ಕೆ ಸಲ್ಲುತ್ತದೆ.

ಬಳ್ಳಾರಿ: ಶಿಕ್ಷಣ ಎನ್ನುವುದು ಉಳ್ಳವರ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಬಡವರು, ದೀನದಲಿತರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರ ಮಕ್ಕಳ ಭವಿಷ್ಯ ರೂಪಿಸುವ ಉದ್ದೇಶದಿಂದ ಶಿಕ್ಷಣ, ಜ್ಞಾನ ಹಾಗೂ ದಾಸೋಹದ ಮೂಲಕ ಸಮಾಜ ಸೇವೆಗೆ ಮುಂದಾದ ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳ ಪೈಕಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವೂ ಒಂದಾಗಿದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಹಾಗೂ ಬಳ್ಳಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.1916ರಲ್ಲಿ ಸ್ಥಾಪನೆಯಾದ ವೀರಶೈವ ವಿದ್ಯಾವರ್ಧಕ ಸಂಘವು ಹಲವು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಜಾತಿ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಅನ್ನ, ಅಕ್ಷರ ಮತ್ತು ದಾಸೋಹದ ಮೂಲಕ ಸಮಾಜದ ಎಲ್ಲ ವರ್ಗದ ಜನರ ಬದುಕಿಗೆ ಬೆಳಕಾಗಿರುವ ಕೀರ್ತಿ ವೀರಶೈವ ಸಮಾಜಕ್ಕೆ ಸಲ್ಲುತ್ತದೆ ಎಂದರು.ದೇಶದಲ್ಲಿ ಶಿಕ್ಷಣದ ವಿಸ್ತರಣೆಗೆ ಹಲವು ಹಂತಗಳಲ್ಲಿ ವಿವಿಧ ಸರ್ಕಾರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕೊಡುಗೆ ನೀಡಿವೆ. ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಅನೇಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಆದರೆ ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು ಅದಕ್ಕೂ ಮುನ್ನವೇ ಮಹತ್ವದ ಹೆಜ್ಜೆ ಇಟ್ಟಿದ್ದವು ಎಂದು ಸ್ಮರಿಸಿದರು.ಬಳ್ಳಾರಿ ವಿವಿ ಸಂಘದ ಅಧೀನದಲ್ಲಿ ವಿವಿಧ ಶಿಕ್ಷಣ ಕೋರ್ಸ್‌ಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಬಳ್ಳಾರಿಯಲ್ಲಿ ಎಂಬಿಬಿಎಸ್ ಕಾಲೇಜಿನ ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ವಿಜಯಾ ಬಿ. ಕೋರಿ ಶೆಟ್ಟಿ ಮಾತನಾಡಿ, ಬಳ್ಳಾರಿಯ ಮೊದಲ ಮಹಿಳಾ ಶಾಸಕರಾಗಿ ಗುರುತಿಸಿಕೊಂಡ ಅಲ್ಲಂ ಸುಮಂಗಳಮ್ಮ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ತರಬೇಕೆಂಬ ಸಂಕಲ್ಪದೊಂದಿಗೆ ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದರು.

ಬೆಂಗಳೂರಿನ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಕೇವಲ ನಿದ್ರೆಯಲ್ಲಿ ಕನಸು ಕಾಣುವುದರಿಂದ ಸಾಧ್ಯವಿಲ್ಲ. ಎಚ್ಚರವಾಗಿರುವಾಗಲೂ ದೊಡ್ಡ ಕನಸು ಕಂಡು, ಅದನ್ನು ನನಸಾಗಿಸಲು ನಿರಂತರ ಪರಿಶ್ರಮ ಪಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ಅವರು, ನಮ್ಮ ತಾಯಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಯಾವುದೇ ಅಹಂಕಾರವಿಲ್ಲದೆ ಸರಳ ಜೀವನ ನಡೆಸುತ್ತಿದ್ದರು. ಮನೆಯಲ್ಲಿನ ಆಕಳು, ಎಮ್ಮೆ ಹಾಲು ಸ್ವತಃ ಹಿಂಡುತ್ತಿದ್ದ ಅವರ ಸರಳತೆಯನ್ನು ತಾವು ಬಾಲ್ಯದಿಂದಲೇ ನೋಡಿದ್ದೇನೆ ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಅಲ್ಲಂ ಸುಮಂಗಳಮ್ಮ ಅವರ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ‘ಸುವರ್ಣ ಸಿರಿ’ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಈ ವೇಳೆ ಎಮ್ಮಿಗನೂರು ಮಹಾಂತ ಮಠದ ವಾಮದೇವ ಪರಪೂಜ್ಯರು, ಮೇಯರ್ ಪಿ. ಗಾದೆಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ, ವಿವಿ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಎಂ. ಕ್ಯಾತ್ಯಾಯಿನಿ ಮರೀದೇವಯ್ಯ, ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ