ಗದಗ, ನರೇಗಲ್ಲ: ಅಂತರಂಗ, ಬಹಿರಂಗ ಶುದ್ಧಿಗೆ ವೀರಶೈವ ಧರ್ಮ ಆದ್ಯತೆ ಕೊಟ್ಟಿದೆ. ತಾನು ಎಲ್ಲರಿಗಾಗಿ ಅನ್ನುವುದು ನಿಜವಾದ ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ದೇಶ ಮತ್ತು ಧರ್ಮ ಮಾನವನ ಎರಡು ಕಣ್ಣು ಇದ್ದ ಹಾಗೇ. ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಜಾತಿ ಜನಾಂಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳೊಂದಿಗೆ ಬಾಳಬೇಕೆಂಬುದನ್ನು ಎಲ್ಲರೂ ಅರಿಯಬೇಕು. ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಎಷ್ಟು ಮುಖ್ಯವೋ ಅಷ್ಟೇ ನೀತಿಗೆ ಧರ್ಮವೂ ಅವಶ್ಯಕವಾಗಿದೆ. ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಸತ್ಯ ಮತ್ತು ಪ್ರಾಮಾಣಿಕತೆ ಬೇಕು. ಮನುಷ್ಯನ ಶಾಂತಿ ನೆಮ್ಮದಿಗೆ ತತ್ವ ಸಿದ್ಧಾಂತಗಳು ಮೂಲ ನೆಲೆಯಾಗಿವೆ. ಕಾಯಕ ಮತ್ತು ದಾಸೋಹದ ಮೂಲಕ ಸಾಮಾಜಿಕ ಸತ್ಕಾರ್ಯ ಎಸಗಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಾಗಮಗಳಲ್ಲಿ ವೀರಶೈವ ಧರ್ಮದ ಮೂಲ ಬೇರುಗಳನ್ನು ಕಾಣಬಹುದು.
ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಾದರೆ ಶಿವಶರಣರು ಆ ವೃಕ್ಷದ ಹೂ ಹಣ್ಣು ಇದ್ದಂತೆ. ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸ ಯಾರೂ ಮಾಡಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯ ಅರಿತು ಬಾಳಬೇಕಾಗುತ್ತದೆ. ನವರಾತ್ರಿಯ ಏಳನೇ ದಿನ ಕಾಳರಾತ್ರಿ ಹೆಸರಿನಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಭೂತ ಪ್ರೇತಾತ್ಮ ಮತ್ತು ಋಣಾತ್ಮಕ ಶಕ್ತಿ ನಾಶ ಮಾಡುವ ಅದ್ಭುತ ಶಕ್ತಿಯಿದೆ. ಈ ದೇವಿ ಆರಾಧನೆಯಿಂದ ಆಪತ್ತು ಸಂಕಟಗಳು ದೂರವಾಗಿ ಜ್ಞಾನ ಶಕ್ತಿ ಮತ್ತು ಸಂಪತ್ತು ಕರುಣಿಸುತ್ತಾಳೆ ಎಂದರು.ಸಂಸ್ಕೃತಿ ಚಿಂತಕ ಮೈಸೂರಿನ ಎ.ಆರ್. ರಘುರಾಮ್ ಮಾತನಾಡಿ, ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಮಹತ್ಕಾರ್ಯವಾಗಬೇಕು. ಯುವ ಜನಾಂಗ ಧರ್ಮದ ದಾರಿಯಲ್ಲಿ ನಡೆದರೆ ಈ ದೇಶದ ಅಮೂಲ್ಯ ಸಂಪತ್ತು ಅವರಾಗುತ್ತಾರೆ. ಯುವ ಶಕ್ತಿ ದೇಶದ ಶಕ್ತಿ ಅಷ್ಟೇ ಅಲ್ಲ ಆಸ್ತಿಯಾಗಿದ್ದಾರೆ. ಇಂಥ ಸಮಾರಂಭಗಳ ಮೂಲಕ ಯುವ ಜನಾಂಗವನ್ನು ಸನ್ಮಾರ್ಗದಲ್ಲಿ ತರಲು ಸಾಧ್ಯವಾಗುತ್ತದೆ ಎಂದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿದರು. ಲಿಂಗಸುಗೂರು ಅಮರೇಶ್ವರಮಠದ ಗಜದಂಡ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಾ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ-ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳಿಗೆ ಶಿವಾಚಾರ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು. ಪ್ರಶಸ್ತಿ ಪುರಸ್ಕೃತ ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಮುಂತಾದವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಜಗದೀಶ ಗುಡಗುಂಟಿಮಠ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ನರೇಗಲ್ಲಿನ ಬಸವರಾಜ ದಿಂಡೂರ ಮುಂತಾದವರು ಮಾತನಾಡಿದರು.
ದಸರಾ ದಾಸೋಹ ಸಮಿತಿ ಅಧ್ಯಕ್ಷ ಕಳಕಪ್ಪ ಬಂಡಿ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಕುಮಾರ ಶಿವು ಹಿರೇಮಠ ಹುಬ್ಬಳ್ಳಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಪ್ರಗತಿ ಹಿರೇಮಠ ಇವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.